LATEST NEWS
ಕ್ಷುಲ್ಲಕ ಕಾರಣಕ್ಕೆ 8 ತಿಂಗಳ ತುಂಬು ಗರ್ಭಿಣಿ ಪತ್ನಿಯನ್ನು ಕೊಂದ ಪತಿ

ಆಂದ್ರಪ್ರದೇಶ ಎಪ್ರಿಲ್ 15: ಪ್ರಿತಿಸಿ ಮದುವೆಯಾಗಿದ್ದು, ಸಣ್ಣ ವಿಚಾರಕ್ಕೆ ನಡೆದ ಜಗಳಕ್ಕೆ ತನ್ನ 8 ತಿಂಗಳ ಗರ್ಭಿಣಿ ಪತ್ನಿಯನ್ನು ಗಂಡ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸೋಮವಾರ ನಡೆದಿದೆ.
ಅನುಷಾ (27) ಮೃತ ಪತ್ನಿ. ಪತಿ ಜ್ಞಾನೇಶ್ವರ್ ಹಾಗೂ ಪತ್ನಿ ಅನುಷಾ ಸೋಮವಾರ ಬೆಳಗ್ಗೆ ಜಗಳವಾಡಿದ್ದು, ಈ ಜಗಳ ತಾರಕಕ್ಕೇರಿ ಜ್ಞಾನೇಶ್ವರ್ ತನ್ನ ಪತ್ನಿಯ ಕತ್ತು ಹಿಸುಕಿದ್ದಾನೆ. ಈ ಸಂದರ್ಭ ಅನುಷಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೇ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ವಿಶಾಖಪಟ್ಟಣಂನ ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್‌ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.