FILM
ನಾನು ಡ್ರಗ್ಸ್ ತೆಗೆದುಕೊಂಡಿಲ್ಲ..ಇರೊದು ಬಾಡಿಗೆ ಮನೆಯಲ್ಲಿ..ಆರೋಪಗಳಿಗೆ ಹೆದರುವಳಲ್ಲ ನಾನು – ಅನುಶ್ರೀ

ಬೆಂಗಳೂರು ಸೆಪ್ಟೆಂಬರ್ 09: ಮಾದಕ ವಸ್ತು ಸೇವನೆ ಕುರಿತ ಆರೋಪಕ್ಕೆ ಇದೇ ಮೊದಲ ಬಾರಿಗೆ ಮಾದ್ಯಮಗಳೊಂದಿಗೆ ಮಾತನಾಡಿರುವ ನಿರೂಪಕಿ ಅನುಶ್ರೀ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕಿಶೋರ್ ಅಮಾನ್ ಶೆಟ್ಟಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಆರೋಪಿಗಳು ಸಾವಿರ ಹೇಳುತ್ತಾರೆ. ಹೇಳಿಕೆಯಲ್ಲಿ ಏನು ಬೇಕಾದರೂ ಹೇಳಬಹುದು. ಪೊಲೀಸರು ಯಾವುದು ಸತ್ಯ, ಸುಳ್ಳು ಎನ್ನುವುದನ್ನು ಪರಿಶೀಲನೆ ಮಾಡುತ್ತಾರೆ’ ಎಂದಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ನಲ್ಲಿರೋ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಮಾಜಿ ಮುಖ್ಯಮಂತ್ರಿ ಸಹಾಯ ಮಾಡಿಲ್ಲ, ಯಾರ ಸಹಾಯವೂ ನನಗೆ ಬೇಕಿಲ್ಲ. ನಾನು ಒಬ್ಬಳೇ ಬೆಂಗಳೂರಿಗೆ ಬಂದಿದ್ದೇನೆ, ಈಗಲೂ ನಿಮ್ಮ ಮುಂದೆ ಒಬ್ಬಳೇ ಬಂದು ನಿಂತಿದ್ದೇನೆ. ಅಲ್ಲದೆ ನಾನು ಭಯಪಟ್ಟುಕೊಂಡು ತಲೆಮರೆಸಿಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ ಎಂದರು.

ಅನುಶ್ರೀ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ರೂಮ್‍ಗೆ ಬರುತ್ತಿದ್ದರು, ಡ್ರಗ್ಸ್ ತರುತ್ತಿದ್ದರು. ಎಲ್ಲರೂ ಜೊತೆಯಲ್ಲಿ ಡ್ರಗ್ಸ್ ಸೇವಿಸುತ್ತಿದ್ದೆವು ಎಂದು ಆರೋಪಿ ಹೇಳಿದ್ದಾನೆ. ಆರೋಪಿಗಳು ಸಾವಿರ ಹೇಳುತ್ತಾರೆ. ಏನುಬೇಕಾದರೂ ಹೇಳಿಕೆ ನೀಡಬಹುದು. ಪೊಲೀಸರು ಹಾಗೂ ಕಾನೂನು ಸರಿ, ತಪ್ಪನ್ನು ಪರಿಶೀಲನೆ ಮಾಡುತ್ತಾರೆ.
ಸಿಸಿಬಿ ಪೊಲೀಸರು 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಅವರ ಎಲ್ಲ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ನಾನು ಭಯಪಟ್ಟುಕೊಂಡು ಓಡಿಹೋಗಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಲಸದ ನಿಮಿತ್ತ ಬೆಂಗಳೂರಿನಿಂದ ಮುಂಬೈಗೆ ನಾನು ಸೋಮವಾರವೇ ಹೋಗಿದ್ದೆ. ನಾನು ಎಲ್ಲಿಯೂ ಹಾರಿಹೋಗಿಲ್ಲ. ಇದು ನನ್ನ ನೆಲ. ಯಾವ ಆರೋಪಗಳು ಬಂದರೂ ನಾನು ಎದುರಿಸುತ್ತೇನೆ. ಮತ್ತೆ ವಿಚಾರಣೆಗೆ ಕರೆದರೆ ಖಂಡಿತಾ ಹಾಜರಾಗುತ್ತೇನೆ. ಈ ಬೆಳವಣಿಗೆಯ ಬಗ್ಗೆ ನನಗೆ ಬೇಜಾರಿದೆ. ಯಾವುದೂ ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವುದಿಲ್ಲ. ನಾನು ಬಹಳ ಸರಳ ವ್ಯಕ್ತಿ. ನಾನು ಯಾವ ಪಾರ್ಟಿ, ಪಬ್‌ಗಳಿಗೆ ಹೋಗುವುದಿಲ್ಲ. ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ನಾನು ಸತ್ಯವಾಗಿದ್ದೇನೆ’ ಎಂದು ಹೇಳಿದ್ದಾರೆ. ಆಸ್ತಿಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅನುಶ್ರೀ, ‘ಹೌದು ನನ್ನ ಮನೆ ಓರಾಯನ್ ಮಾಲ್ ಎದುರಿಗೇ ಇದೆ. ಆದರೆ ಅದು ಬಾಡಿಗೆ ಮನೆ. ಇಡೀ ಕಟ್ಟಡವೇನೂ ನನ್ನದಲ್ಲ. ಈ ಕುರಿತು ಮನೆ ಮಾಲೀಕರನ್ನೇ ಕೇಳಬಹುದು. ಮಂಗಳೂರಿನ ಕದ್ರಿಯಲ್ಲಿ ಒಂದು ಮನೆ ಇದೆ. ಅದರ ಸಾಲ ಇನ್ನೂ ಬಾಕಿ ಇದೆ’ ಎಂದಿದ್ದಾರೆ.