KARNATAKA
ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ನಿಧನ

ಬೆಳಗಾವಿ ಅಕ್ಟೋಬರ್ 23: ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ. ಬಿಜೆಪಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಮಾಮನಿ ಅವರಿಗೆ 56 ವರ್ಷ ವಯಸ್ಸಾಗಿತ್ತು. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರಲ್ಲಿ ಮುಂಚೂಣಿಯಲ್ಲಿದ್ದರು. ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಆನಂದ ಮಾಮನಿ ಅವರು ಕ್ಯಾನ್ಸರ್ ಕಾಯಿಲೆಯಿಂದಾಗಿ ಕೆಲ ದಿನಗಳಿಂದ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಬೆಂಗಳುರಿನ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಇತ್ತೀಚೆಗಷ್ಟೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಆನಂದ್ ಮಾಮನಿ ಅವರು, ಶೀಘ್ರದಲ್ಲೇ ಗುಣಮುಖವಾಗಿ ಜನ ಸೇವೆಗೆ ಬರುತ್ತೇನೆ, ಯಾರು ಆತಂಕಪಡಬೇಡಿ. ಊಹಾಪೋಹಗಳಿಗೆ ಕಿವಿಗೊಡಬೇಡಿ. ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದರು.

ಆನಂದ್ ಮಾಮನಿ ಅವರ ಪಾರ್ಥಿವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ಸವದತ್ತಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು, ಎಲ್ಲಾ ಸಿದ್ಧತೆಗಳು ಆರಂಭವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.