LATEST NEWS
ಅಂಗವೈಕಲ್ಯತೆ ಮೆಟ್ಟಿನಿಂತ ಛಲಗಾರನ ಬೆಂಬಲಕ್ಕೆ ನಿಂತ ಆನಂದ್ ಮಹೀಂದ್ರಾ

ಬೆಂಗಳೂರು: ಜೀವನದಲ್ಲಿ ಸಾಧಿಸುವ ಛಲವಿದ್ದರೆ ನಮ್ಮ ನ್ಯೂನತೆಗಳು ಯಾವುದೇ ಸಮಸ್ಯೆಯಾಗುವುದಿಲ್ಲ ಎನ್ನುವುದಕ್ಕೆ ದೆಹಲಿಯ ವ್ಯಕ್ತಿಯೊಬ್ಬರು ಉದಾಹರಣೆಯಾಗಿದ್ದಾರೆ. ಹುಟ್ಟಿನಿಂದ ಅಂಗವಿಕಲತೆಗೆ ಒಳಗಾಗಿರುವ ಇವರು ಕೈಕಾಲುಗಳಿಲ್ಲದಿದ್ದರೂ ಸ್ಕೂಟಿ ಎಂಜಿನ್ ಬಳಸಿ ತಯಾರಿಸಿದ ಬ್ಯಾಟರಿ ರಿಕ್ಷಾ ರೀತಿಯ ವಾಹನವನ್ನು ಓಡಿಸುತ್ತಾ ಅವರು ಜೀವನ ಸಾಗಿಸುತ್ತಿದ್ದಾರೆ.
ಈ ವ್ಯಕ್ತಿಯ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಅದನ್ನು ನೋಡಿದ್ದ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಎರಡೂ ಕೈ ಮತ್ತು ಕಾಲುಗಳಿಲ್ಲದ ವ್ಯಕ್ತಿ , ಸಾರ್ವಜನಿಕರೊಬ್ಬರಿಗೆ ಉತ್ತರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಇದು ಸ್ಕೂಟಿಯ ಇಂಜಿ್ನ್ ಅಲ್ಲವೇ ಎಂದು ಪ್ರಯಾಣಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗವೈಕಲ್ಯದ ನಡುವೆಯೂ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ವಿವರಿಸಿದರು. ‘ನನಗೆ ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಮತ್ತು ವಯಸ್ಸಾದ ತಂದೆ ಇದ್ದಾರೆ. ಅದಕ್ಕಾಗಿಯೇ ನಾನು ದುಡಿಯಲು ಬರುತ್ತೇನೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲ ವ್ಯಕ್ತಿ ಹೇಳುತ್ತಾರೆ. ಐದು ವರ್ಷಗಳಿಂದ ನಾನು ಈ ವಾಹನವನ್ನು ಓಡಿಸುತ್ತಿದ್ದೇನೆ ಎಂದು ಅವರು ವಿವರಿಸಿದರು. ತಮ್ಮ ಛಲವನ್ನು ಕಂಡು ಅಭಿನಂದಿಸಿ ವಿಡಿಯೊ ಚಿತ್ರೀಕರಿಸುವ ಜನರನ್ನು ಕಂಡು ಮುಗುಳ್ನಗೆ ಬೀರುತ್ತಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ ಈ ದಿನ ನನ್ನ ಟೈಮ್ ಲೈನ್‌ಗೆ ಈ ವಿಡಿಯೊ ಬಂದಿದೆ. ಇದು ಎಷ್ಟು ಹಳೆಯದು ಅಥವಾ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ, ಆದರೆ ಈ ಸಂಭಾವಿತ ವ್ಯಕ್ತಿಯಿಂದ ನಾನು ವಿಸ್ಮಯಗೊಂಡಿದ್ದೇನೆ. ಅವರು ತಮ್ಮ ಅಂಗವೈಕಲ್ಯದ ನಡುವೆ ಅವರು ತಾವು ಹೊಂದಿರುವುದಕ್ಕೆ ಕೃತಜ್ಞರಾಗಿದ್ದಾರೆ’ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ಧಾರೆ. ಬಳಿಕ ಅವರು ವಿಡಿಯೊವನ್ನು ಸಹೋದ್ಯೋಗಿ ರಾಮ್ ಮತ್ತು ಮಹೀಂದ್ರಾ ಲಾಜಿಸ್ಟಿಕ್ಸ್ ಅವರಿಗೆ ಟ್ಯಾಗ್ ಮಾಡಿದ್ದು,‘ರಾಮ್, ಅವರನ್ನು ವ್ಯಾಪಾರದ ಡೆಲಿವರಿ ಸಹಾಯಕರನ್ನಾಗಿ ಮಾಡಬಹುದೇ?’ಎಂದು ಕೇಳಿದ್ದಾರೆ. ಈ ವಿಡಿಯೊವನ್ನು ನಿನ್ನೆ ಮಧ್ಯಾಹ್ನ ಮಹೀಂದ್ರಾ ಅವರು ಹಂಚಿಕೊಂಡಾಗಿನಿಂದ ಟ್ವಿಟರ್‌ನಲ್ಲಿ 50,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ವಿಡಿಯೊ ಒಂದೆರಡು ವಾರಗಳಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.