KARNATAKA
ಅಮಿತಾಭ್ ಬಚ್ಚನ್ ರೋಲ್ಸ್ ರಾಯ್ಸ್ ಕಾರು ಜಪ್ತಿ!
ಬೆಂಗಳೂರು, ಅಗಸ್ಟ್ 23: ಬಾಲಿವುಡ್ ನ ಹಿರಿಯ ನಟ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವ ‘ರೋಲ್ಸ್ ರಾಯ್ಸ್ ಕಾರು ಸೇರಿ ಮೋಟಾರು ವಾಹನ ನಿಯಮ ಉಲ್ಲಂಘನೆ ಆರೋಪದಲ್ಲಿ ಕೋಟ್ಯಂತರ ರೂ. ಮೌಲ್ಯದ 7 ಐಷಾರಾಮಿ ಕಾರುಗಳನ್ನು ಆರ್ಟಿಒ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಭಾನುವಾರ ಜಪ್ತಿ ಮಾಡಿದ್ದಾರೆ.
ತೆರಿಗೆ ವಂಚಿಸಿ ಓಡಾಡುತ್ತಿರುವ ಹೈ ಎಂಡ್ ಕಾರುಗಳ ಬೆನ್ನತ್ತಿದ್ದ ಆರ್ಟಿಒ ಅಧಿಕಾರಿಗಳು, ಭಾನುವಾರ ಯುಬಿ ಸಿಟಿ ಬಳಿಗೆ ವಾಹನಗಳು ಬರುವ ಖಚಿತ ಮಾಹಿತಿ ಸಂಗ್ರಹಿಸಿದ್ದರು. ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನರೇಂದ್ರ ಹೋಳ್ಕರ್ ನೇತೃತ್ವದಲ್ಲಿ ಎಆರ್ಟಿಒ ರಾಜಣ್ಣ, ಇನ್ಸ್ಪೆಕ್ಟರ್ಗಳಾದ ತಿಪ್ಪೇಸ್ವಾಮಿ, ಸುಧಾಕರ್, ಶೆಟ್ಟರ್, ರಂಜಿತ್, ರಾಜೇಶ್, ರಾಜ್ಕುಮಾರ್ ಒಳಗೊಂಡ 6 ತಂಡ ರಚಿಸಲಾಗಿತ್ತು. ಚರ್ಚ್ಸಿಟ್ರಟ್ನಲ್ಲಿ ಇಬ್ಬರು ಹಾಗೂ ಯುಬಿ ಸಿಟಿ ಸಂರ್ಪಸುವ 4 ರಸ್ತೆಗಳಲ್ಲೂ ಒಬ್ಬೊಬ್ಬರು ಇನ್ಸ್ಪೆಕ್ಟರ್ಗಳು ಕಾದಿದ್ದರು.
ಯಾರದ್ದೋ ಹೆಸರಿನಲ್ಲಿರುವ ಕಾರುಗಳನ್ನು ಇನ್ಯಾರೋ ಓಡಿಸುತ್ತಿರುವುದು ಕಂಡುಬಂದಿದ್ದು, ವಾಹನಗಳಿಗೆ ಸಂಬಂಧಿಸಿದ ಅಸಲಿ ದಾಖಲೆ ಪತ್ರಗಳು ಯಾರ ಬಳಿಯೂ ಪತ್ತೆಯಾಗದಿರುವುದು ಅನುಮಾನ ಮೂಡಿಸಿದೆ. ಭಾನುವಾರ ಸಂಜೆ ಕಬ್ಬನ್ಪಾರ್ಕ್ ಸಮೀಪದ ಯುಬಿ ಸಿಟಿಗೆ ಕಾರುಗಳು ಬರುವ ಮಾಹಿತಿ ಮೇರೆಗೆ ಆರ್ಟಿಒ ಅಧಿಕಾರಿಗಳ ತಂಡ ದಾಳಿ ನಡೆಸಿತು. ರೋಲ್ಸ್ ರಾಯ್ಸ್ ಮತ್ತು ಪೋರ್ಶೆಯಂತಹ ಹೈ ಎಂಡ್ ಕಾರುಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು.
ಆರ್ಸಿ ಕಾರ್ಡ್, ಇನ್ಶುರೆನ್ಸ್, ಎಮಿಷನ್ ಸರ್ಟಿಫಿಕೇಟ್ ಸೇರಿ ವಾಹನಗಳಿಗೆ ಸಂಬಂಧಿಸಿದ ದಾಖಲೆ ಇರಲಿಲ್ಲ. ತೆರಿಗೆ ವಂಚಿಸುವ ಉದ್ದೇಶದಿಂದ ಪಾಂಡಿಚೇರಿ, ದೆಹಲಿ ಮತ್ತು ಪಂಜಾಬ್ ಸೇರಿ ಬೇರೆಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿ, ರಾಜ್ಯದಲ್ಲಿ ಓಡಿಸುತ್ತಿರುವುದು ಪರಿಶೀಲನೆಯಲ್ಲಿ ಗೊತ್ತಾಗಿದೆ. ಬೇರೆ ರಾಜ್ಯದಲ್ಲಿ ನೋಂದಣಿಯಾದ ವಾಹನ 1 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ರಾಜ್ಯದಲ್ಲಿರುವಂತಿಲ್ಲ. 1 ವರ್ಷ ಮೇಲ್ಪಟ್ಟರೆ ನೋಂದಣಿಯನ್ನು ಇಲ್ಲಿಗೆ ವರ್ಗಾಯಿಸಿಕೊಂಡು ತೆರಿಗೆ ಪಾವತಿಸಬೇಕು. ಆದರೆ, ಮಾಲೀಕರು ತೆರಿಗೆ ಪಾವತಿಸದೆ ನಿಯಮಬಾಹಿರವಾಗಿ ರಾಜ್ಯದಲ್ಲಿ ವಾಹನ ಚಲಾಯಿಸುತ್ತಿರುವುದು ಪರಿಶೀಲನೆಯಲ್ಲಿ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಲ್ಸಿ ಫಾರೂಕ್ ಅವರಿಗೆ ಸೇರಿದ ಫೆರಾರಿ ಮತ್ತು ಜಿಪಿಆರ್ ಕಾರುಗಳನ್ನೂ ಅಧಿಕಾರಿಗಳು ತಡೆದರು. ಈ ವೇಳೆ ಸಿಟ್ಟಾದ ಫಾರೂಕ್, ನನ್ನ ಗಾಡಿಯನ್ನೇ ಹಿಡೀತೀರಾ ಎಂದು ಆವಾಜ್ ಹಾಕಿದ್ದಾರೆ. ಅಲ್ಲದೆ ವಾಹನಗಳನ್ನು ಬಿಡುವಂತೆ ಬೇರೆಬೇರೆಯವರಿಂದ ಕರೆ ಮಾಡಿಸಿ ಒತ್ತಡ ಹಾಕಿದ್ದಲ್ಲದೆ ದೌರ್ಜನ್ಯದ ರೀತಿಯಲ್ಲಿ ಸ್ಥಳದಿಂದ ವಾಹನಗಳನ್ನು ಕೊಂಡೊಯ್ದಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನಗಳನ್ನು ಜಪ್ತಿ ಮಾಡಲಾಗಿದೆ. ಮಾಲೀಕರು ಅಸಲಿ ದಾಖಲೆಗಳನ್ನು ಒದಗಿಸಿದರೆ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತದೆ. ಇಲ್ಲವಾದರೆ ಕೋರ್ಟ್ ಮೂಲಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂಎಚ್-02 ಬಿಬಿ2 ನಂಬರ್ನ 10 ಕೋಟಿ ರೂ. ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರಿನ ಮಾಲೀಕತ್ವ ಪರಿಶೀಲಿಸಿದಾಗ ಅಮಿತಾಭ್ ಬಚ್ಚನ್ ಹೆಸರಿನಲ್ಲಿರುವುದು ಗೊತ್ತಾಗಿದೆ. ಸಲ್ಮಾನ್ಖಾನ್ ಎಂಬಾತ ವಾಹನ ಚಲಾಯಿಸುತ್ತಿದ್ದ. ಅಧಿಕಾರಿಗಳು ಪ್ರಶ್ನಿಸಿದಾಗ ಮೊದಲಿಗೆ ತಾನು ಅಮಿತಾಭ್ ಬಚ್ಚನ್ ಸಂಬಂಧಿ ಎಂದು ಹೇಳಿಕೊಂಡಿದ್ದ. ಆದರೆ, ಮುಸ್ಲಿಂ ಹೆಸರಿಟ್ಟುಕೊಂಡಿರುವ ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಸಂಬಂಧಿ ಹೇಗಾಗುತ್ತಾನೆ ಎಂಬ ಅನುಮಾನ ಬಂದಿದೆ. ಮತ್ತಷ್ಟು ವಿಚಾರಿಸಿದಾಗ ಬಾಬು ಹೆಸರಿನ ವ್ಯಕ್ತಿಗೆ ಸೇರಿದ ಕಾರು ಎಂದಿದ್ದಾನೆ. ಇನ್ಶೂರೆನ್ಸ್, ಆರ್ಸಿ ಕಾರ್ಡ್, ಎಮಿಷನ್ ಸರ್ಟಿಫಿಕೆಟ್ ಯಾವುದೂ ಇರಲಿಲ್ಲ.
2019ರಲ್ಲಿ ಅಮಿತಾಭ್ ಬಚ್ಚನ್ ಅವರಿಂದ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದೆ. ಆದರೆ, ಈವರಗೆ ನನ್ನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿಲ್ಲ. ಅಮಿತಾಭ್ ಅವರ ಹೆಸರಿನಲ್ಲಿ ಸಾಕಷ್ಟು ಕಾರುಗಳಿವೆ, ತೆರಿಗೆ ವಂಚನೆ ಮಾಡಿಲ್ಲ ಎಂದು ಬಾಬು, ರೋಲ್ಸ್ರಾಯ್ಸ್ ಮಾಲೀಕ ಹೇಳಿದ್ದಾರೆ.