BELTHANGADI
ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಅಭಿವೃದ್ದಿ ಬಗ್ಗೆ ಪಾಠ ಮಾಡ್ತಾರೆ – ಸ್ಮೃತಿ ಇರಾನಿ
ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಅಭಿವೃದ್ದಿ ಬಗ್ಗೆ ಪಾಠ ಮಾಡ್ತಾರೆ – ಸ್ಮೃತಿ ಇರಾನಿ
ಮಂಗಳೂರು ಮೇ 07: ಗಾಂಧಿ ಕುಟುಂಬ ಕಳೆದ 60 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಅಮೇಠಿ ಕ್ಷೇತ್ರಕ್ಕೆ ರೈಲ್ವೆ ಹಳಿ ಬರಲು ಮೋದಿ ಬರಬೇಕಾಯಿತು. ಆದರೆ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಬಂದು ಅಭಿವೃದ್ದಿ ವಿಚಾರ ಬಗ್ಗೆ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಪರ ಮತಯಾಚನೆ ನಡೆಸಿದ ಸ್ಮೃತಿ ಇರಾನಿ ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದರು.
ಗಾಂಧಿ ಕುಟುಂಬ 60 ವರ್ಷಗಳಿಂದ ಪ್ರತಿನಿಧಿಸುವ ಅಮೇಠಿ ಕ್ಷೇತ್ರದ ಬಡಜನರ ಕಷ್ಟವನ್ನು ನೀವು ನೋಡಿಯೇ ಹೇಳಬೇಕಷ್ಟೆ. ನಾಲ್ಕು ತಲೆಮಾರುಗಳಿಂದ ಸಾಧ್ಯವಾಗದ ಕೆಲಸ ಅಮೇಠಿಯಲ್ಲಿ ಈಗ ಆಗ್ತಿದೆ. ಅಮೇಠಿಗೆ ರೈಲ್ವೆ ಹಳಿ ಬರಲು ಮೋದಿ ಬರಬೇಕಾಯ್ತು ಅಂತಾರೆ ಜನ. ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಕರ್ನಾಟಕದಲ್ಲಿ ಅಭಿವೃದ್ಧಿ ಪಾಠ ಮಾಡ್ತಾರೆ ಎಂದು ಕಿಡಿಕಾರಿದರು.
ಮೋದಿ ಸರಕಾರ ಮಾಡುತ್ತಿರುವ ಅಭಿವೃದ್ಧಿಯೇ ರಾಹುಲ್ ಗಾಂಧಿಗೆ ಚಿಂತೆಯಾಗಿದೆ .ಶೌಚಾಲಯ ಕಟ್ಟೋಕೆ ಹೋದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆಯಾಗುತ್ತೆ. ಸರ್ಜಿಕಲ್ ಸ್ಟೈಕ್ ಆದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆ ಕಾಡುತ್ತೆ. ಬಡತನ ನಿರ್ಮೂಲನೆಗೆ ಪ್ರಯತ್ನ ಮಾಡಿದಾಗ ಕೂಡ ರಾಹುಲ್ ಗಾಂಧಿಗೆ ಸಮಸ್ಯೆಯಾಗುತ್ತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.