LATEST NEWS
ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ಬಳಿ ಕಾಮಗಾರಿ : ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ
ಉಡುಪಿ, ಡಿಸೆಂಬರ್ 17 : ಉಡುಪಿ ತಾಲೂಕಿನ ಅಂಬಲಪಾಡಿ ಜಂಕ್ಷನ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡೆ ತಡೆಗಳು ಉಂಟಾಗುತ್ತಿರುವ ಹಿನ್ನೆಲೆ, ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989 ರ ಕಲಂ 221(ಎ)(2) & (5) ರನ್ವಯ, ಅಂಬಲಪಾಡಿ ಜಂಕ್ಷನ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಎಲ್ಲಾ ವಾಹನಗಳಿಗೆ ಬದಲೀ ಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಆದೇಶಿಸಿರುತ್ತಾರೆ.
ಸ್ವಾಗತ ಗೋಪುರದಿಂದ ಅಂಬಲಪಾಡಿ-ಕರಾವಳಿ ಜಂಕ್ಷನ್ ವರೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸಬೇಕು. ಕರಾವಳಿಯಿಂದ ಅಂಬಲಪಾಡಿ-ಸ್ವಾಗತ ಗೋಪುರದ ಕಡೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸಬೇಕು. ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ-ಕಿದಿಯೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ- ಕಾಂಗ್ರೆಸ್ ಭವನ-ಅಗ್ನಿಶಾಮಕ ದಳದ ಕಡೆಯಿಂದ ಸ್ವಾಗತ ಗೋಪುರದವರೆಗೆ ಬಂದು ನಂತರ ಸರ್ವೀಸ್ ರಸ್ತೆಯಿಂದ ಅಂಬಲಪಾಡಿ ಕಡೆಗೆ ಹೋಗಬೇಕು. ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ಕರಾವಳಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ ಕಡೆಯಿಂದ ಪೊಲೀಸ್ ಅಧೀಕ್ಷಕರ ಕಛೇರಿ ರಸ್ತೆಯಿಂದಾಗಿ ಬನ್ನಂಜೆ ಕಡೆಗೆ ಹೋಗುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ
ತಿಳಿಸಿದೆ.