LATEST NEWS
ಡಿಸೆಂಬರ್ 31 ರಿಂದ ಜನವರಿ 2 ರವರೆಗ ಆಳ್ವಾಸ್ ನುಡಿಸಿರಿ ಮತ್ತು ವಿರಾಸತ್

ಮಂಗಳೂರು ನವೆಂಬರ್ 12: ಕೊರೊನಾ ಕಾರಣದಿಂದ ನಿಂತಿದ್ದ ಆಳ್ವಾಸ್ ನುಡಿಸಿರಿ ಮತ್ತು ಆಳ್ವಾಸ್ ವಿರಾಸತ್ ಈ ಬಾರಿ ಡಿಸೆಂಬರ್ 31 ರಿಂದ ಜನವರಿ 2 ವರೆಗೆ ಜಂಟಿಯಾಗಿ ನಡೆಯಲಿದೆ.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದಲ್ಲಿ ರಾಷ್ಟ್ರಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಆಳ್ವಾಸ್ ವಿರಾಸತ್ ಮತ್ತು ನುಡಿಹಬ್ಬವಾದ ಆಳ್ವಾಸ್ ನುಡಿಸಿರಿ ಪ್ರತಿ ವರ್ಷ ಲಕ್ಷಾಂತರ ಮಂದಿ ಈ ವೈಭವವನ್ನು ಕಣ್ತುಂಬಿಕೊಳ್ಳಲು ನಿರೀಕ್ಷೆಯಿಂದ ಕಾಯುತ್ತಿದ್ದರು. ಆದರೆ ಕೊರೊನಾ ಕಾರಣಗಳಿಂದಾಗಿ ಕಳೆದ 2 ವರ್ಷಗಳಿಂದ ಈ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಬಾರಿ ಸರಕಾರದ ಮಾರ್ಗಸೂಚಿ ಪಾಲಿಸಿಕೊಂಡು ಈ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ 2021ರ ಡಿಸೆಂಬರ್ 31ರಂದು ಆಳ್ವಾಸ್ ವಿರಾಸತ್ ಮತ್ತು ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ಉದ್ಘಾಟನೆಗೊಂಡು, 2022ರ ಜ.2ರವರೆಗೆ ಮುಂದುವರಿಯಲಿದೆ. ಹಗಲಿನ ಹೊತ್ತು ವಿದ್ಯಾಗಿರಿಯಲ್ಲಿ ನುಡಿಸಿರಿ ನಡೆದರೆ, ಸಂಜೆ ವೇಳೆ ಪುತ್ತಿಗೆ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಆಳ್ವಾಸ್ ವಿರಾಸತ್ ವೈಭವಿಸಲಿದೆ.
ವಿರಾಸತ್ ಮತ್ತು ನುಡಿಸಿರಿ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿ ಈಗಲೂ ಜಾರಿಯಾಗಿರುವ ಕಾರಣ ಇಡೀ ಕಾರ್ಯಕ್ರಮವನ್ನು ವೈಭವಕ್ಕೆ ವಿಶೇಷ ಆದ್ಯತೆ ನೀಡಿದರೆ, ಅರ್ಥಪೂರ್ಣವಾಗಿ ಮಾಡಲು ನಿರ್ಧರಿಸಲಾಗಿದೆ. ನುಡಿಸಿರಿ ಮತ್ತು ವಿರಾಸತ್ ಬಗ್ಗೆ ಆಸಕ್ತಿಯಿರುವವರು ಮಾತ್ರ ಬರಬೇಕೆಂಬುದು ನಮ್ಮ ನಿರೀಕ್ಷೆ. ನುಡಿಸಿರಿ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 3 ಸಾವಿರ ಮಂದಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದ್ದು, ವಿರಾಸತ್ ಪುತ್ತಿಗೆಯಲ್ಲಿ ನಡೆಯುವ ಕಾರಣ ಯಾವುದೇ ನಿಬಂಧನೆಗಳನ್ನು ಹಾಕುತ್ತಿಲ್ಲ ಎನ್ನುತ್ತಾರೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ .