LATEST NEWS
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಪ್ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಕಿರುಕುಳ ಆರೋಪ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಪ್ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರಿಗೆ ಕಿರುಕುಳ ಆರೋಪ
ಮಂಗಳೂರು ಅಕ್ಟೋಬರ್ 15: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಪ್ ರಾಷ್ಟ್ರಗಳಿಗೆ ತೆರಳು ಅಲ್ಪಸಂಖ್ಯಾತ ಪ್ರಯಾಣಿಕರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಉಳ್ಳಾಲ ವಲಯ ಡಿವೈಎಫ್‍ಐ ಸಂಘಟನೆ ಆರೋಪಿಸಿದೆ. ಈಗಾಗಲೇ ಕೇರಳದ ಕಣ್ಣೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದ ನಂತರ ಪ್ರಯಾಣಿಕರ ಕೊರತೆ ಎದುರಿಸುತ್ತಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಈಗ ಪ್ರಯಾಣಿಕರಿಗೆ ಕಿರುಕುಳ ಆರೋಪ ಕೇಳಿ ಬಂದಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗವು ಪ್ರಯಾಣಿಕರಿಗೆ ಅನಗತ್ಯವಾದ ದಾಖಲೆ ಹಾಜರುಪಡಿಸಲು ಒತ್ತಾಯಿಸಿ ಕಿರುಕುಳ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಸದ್ಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಉಳ್ಳಾಲ ವಲಯ ಡಿವೈಎಫ್‍ಐ ಮುಖಂಡ ಅಶ್ರಫ್ ಕೆಸಿ ರೋಡ್ ಆಗ್ರಹಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ಸಿಬ್ಬಂದಿ ಹಾಗೂ ಇಮಿಗ್ರೇಷನ್ ಅಧಿಕಾರಿಗಳು ಗಲ್ಫ್ ಗೆ ತೆರಳುವ ಅದರಲ್ಲೂ ವಿಶೇಷವಾಗಿ ದುಬೈಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಕಿರುಕುಳ ನೀಡುತ್ತಿದ್ದಾರೆ. ಪಾಸ್ ಪೋರ್ಟ್, ವಿಮಾನ ಯಾನದ ಟಿಕೆಟ್ ಹಾಜರು ಪಡಿಸಿದರೂ ಕೂಡ ಪ್ರಯಾಣಕ್ಕೆ ಅಗತ್ಯವೇ ಇರದ ದಾಖಲೆಗಳನ್ನು ಹಾಜರುಪಡಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಲಗೇಜ್ ಸ್ಕ್ಯಾನಿಂಗ್ ಸೌಲಭ್ಯವಿದ್ದರೂ ಅನಗತ್ಯವಾಗಿ ಲಗೇಜ್ ಬಿಚ್ಚುವಂತೆ ಮಾಡಿ ಆನಂತರ ಅದರಿಂದ ವಸ್ತುಗಳನ್ನು ಲಪಟಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಭಾರತೀಯ ಪಾಸ್ ಪೋರ್ಟ್ ಹೊಂದಿದ್ದರೂ ಭಾರತೀಯ ನಾಗರೀಕನೇ ಅಲ್ಲದ ರೀತಿ ಸಂಶಯಾಸ್ಪದವಾಗಿ ನೋಡಲಾಗುತ್ತದೆ ಎಂದು ದೂರಲಾಗಿದೆ.
ಇತ್ತೀಚೆಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳ ಕಿರುಕುಳದ ಬಗ್ಗೆ ಪ್ರತಿಭಟನೆ ನಡೆಸಿದರೂ ಕಿರುಕುಳ ಹಾಗೆಯೇ ಮುಂದುವರೆದಿದೆ ಎಂದು ಡಿವೈಎಫ್ಐ ಆರೋಪಿಸಿದೆ. ಅಲ್ಲದೆ ಇನ್ನಾದರೂ ಪ್ರಾಧಿಕಾರದ ಮುಖ್ಯಸ್ಥರು ಈ ಕಿರುಕುಳ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.