LATEST NEWS
ಕಳೆದ 8 ವರ್ಷದಲ್ಲಿ ಹಣಕಾಸು ಇಲಾಖೆ ಅಂದಾಜುಗಳೆಲ್ಲ ವಿಫಲ: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಆಗಸ್ಟ್ 28: ಮುಂದಿನ ಎರಡು ವರ್ಷಗಳಲ್ಲಿ ಭಾರತವು ಶೇಕಡ 7.4ರಷ್ಟು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಆರ್ಥಿಕ ಭವಿಷ್ಯ ನುಡಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಟ್ವೀಟ್ ಮಾಡಿರುವ ಅವರು, ‘ಮುನ್ನೋಟ ಎಂದರೆ ಏನೂ ಅಲ್ಲ. ಕಳೆದ 8 ವರ್ಷಗಳಲ್ಲಿ ಹಣಕಾಸು ಸಚಿವಾಲಯದ ಎಲ್ಲಾ ಅಂದಾಜು ಲೆಕ್ಕಾಚಾರಗಳು ಹೇಳಿದ ಗುರಿ ತಲುಪುವಲ್ಲಿ ವಿಫಲವಾಗಿವೆ. ವಾಸ್ತವವಾಗಿ ಜಿಡಿಪಿ ಬೆಳವಣಿಗೆ ದರವು 2016 ರಿಂದ ಕರೋನಾ ಸಾಂಕ್ರಾಮಿಕ ಕಾಲದ ವರೆಗೆ ವರ್ಷದಿಂದ ವರ್ಷಕ್ಕೆ ಕುಸಿದಿದೆ’ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಈ ಹಿಂದೆಯೂ ಆರ್ಥಿಕತೆ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ‘ರಾಷ್ಟ್ರದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯಲ್ಲಿ ಮೋದಿ ಸರ್ಕಾರ ‘ವಿಕಾಸ’ ತರುವಲ್ಲಿ ವಿಫಲವಾಗಿದೆ ಎಂಬುದು ಸಾಬೀತಾಗಿದೆ’ ಎಂದು ಈ ಹಿಂದೆ ಅವರು ಹೇಳಿದ್ದರು.
Projection means nothing. In the past 8 years all projections of the Finance Ministry are hugely off the mark, and below the stated target. In fact GDP growth rate declined year after year since 2016 till Corona Pandemic hit the economy.
— Subramanian Swamy (@Swamy39) August 27, 2022
2022-23ರಲ್ಲಿ ಭಾರತವು ಶೇ 7.4 ರಷ್ಟು ಬೆಳವಣಿಗೆ ಸಾಧಿಸಲಿದೆ. ಮುಂದಿನ ವರ್ಷವೂ ಅದೇ ವೇಗದಲ್ಲಿ ಮುನ್ನಡೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಹೇಳಿದ್ದಾರೆ.