LATEST NEWS
ಆಳ್ವಾಸ್ ವಿರಾಸತ್ 2024 ಗೆ ವೈಭವದ ಚಾಲನೆ
ಮೂಡುಬಿದಿರೆ ಡಿಸೆಂಬರ್ 11: ದೇಶದ ವೈವಿಧ್ಯಮಯ ಕಲೆ, ಸಂಸ್ಕೃತಿ ಉತ್ಸವ ‘ಅಳ್ವಾಸ್ ವಿರಾಸತ್ ಗೆ ವರ್ಣರಂಜಿತ ಚಾಲನೆ ದೊರೆತಿದೆ. ಸಾವಿರಾರು ಜನರ ಎದುರು ಆಳ್ವಾಸ್ ವಿರಾಸತ್ ಅದ್ದೂರಿಯಾಗಿ ಪ್ರಾರಂಭವಾಗಿದೆ. 30 ನೇ ವರ್ಷದ ಆಳ್ವಾಸ್ ವಿರಾಸತ್ ಆರು ದಿನಗಳ ಕಾಲ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಡಿ.15ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್‌ಗೆ ಇಲ್ಲಿನ ವನಜಾಕ್ಷಿ ಕೆ.ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಮಂಗಳವಾರ ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಾರ್ಯಕ್ರಮ. ಸಾಹಿತ್ಯ ಮತ್ತು ಸಂಸ್ಕೃತಿ ಜೊತೆಯಾಗಿ ಮೇಲೈಸಿದ ಕಾರ್ಯಕ್ರಮ. ನಮ್ಮ ಸಾಂಸ್ಕೃತಿಕ ಸಂಪತ್ತು ಹೆಚ್ಚಾದಾಗ ಮನಸ್ಸು ಅರಳುತ್ತದೆ. ಆಳ್ವಾಸ್ ಕೃಷಿ ಮೇಳ ಕಂಡು ನೀವೂ ಸಣ್ಣ ಕೈತೋಟ ಮಾಡಿ. ಮಣ್ಣು. ಪರಿಸರವನ್ನು ಪ್ರೀತಿಸಿ ಎಂದು ಸಲಹೆ ನೀಡಿದರು. ಪಂಚೇಂದ್ರೀಯಗಳಿಗೆ ಉಣಬಡಿಸುವ ಡಾ.ಮೋಹನ ಆಳ್ವ ಅವರದ್ದು ಹೃದಯ ವೈಶಾಲ್ಯದ ವ್ಯಕ್ತಿತ್ವ. ಇಂಥ ವ್ಯಕ್ತಿತ್ವ ನಾಡಿನಾದ್ಯಂತ ಹೆಚ್ಚಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಂ.ಜಿ.ಆರ್.ಗ್ರೂಪ್ ಅಧ್ಯಕ್ಷ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, ಆಳ್ವರ ದೃಷ್ಟಿಯೇ ಕ್ರಿಯೆಯಾಗಿ ಇಲ್ಲಿ ರೂಪುಗೊಂಡಿದೆ. ಅವರ ಪ್ರಯೋಗ ಇಂದು ನಾಡಿಗೆ ಕೊಡುಗೆ ನೀಡಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಅಂದು ಊರಿಗೆ ಸೀಮಿತವಾಗಿದ್ದ ವಿರಾಸತ್ ಇಂದು ರಾಷ್ಟ್ರೀಯ ಹಬ್ಬವಾಗಿದೆ ಎಂದರು. ಇಂದು ದೇಶದಲ್ಲಿ ವಿದ್ಯಾರ್ಥಿಗಳ ಸಂಖ್ಯೆ 52 ಕೋಟಿ ಇದೆ. ಯುವ ಸಂಪತ್ತಿನ ಬಗ್ಗೆ ನಾವು ಯೋಚಿಸಬೇಕು. ನಮ್ಮ ಸಂಸ್ಥೆಯಲ್ಲಿ ಪ್ರತಿವರ್ಷ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ತರಬೇತಿ ಪಡೆದು, ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ವಿರಾಸತ್ ಅನ್ನು ಸಮಗ್ರವಾಗಿ ರೂಪಿಸಲಾಗಿದ್ದು, ಪಂಚೇಂದ್ರಿಯಗಳಿಗೆ ಜ್ಞಾನ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಆಳ್ವಾಸ್ ವಿರಾಸತ್ ಚಾಲೆನೆಗೆ ಮೊದಲು ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಮೆರವಣಿಗೆ ಇಡೀ ಆಳ್ವಾಸ್ ನಲ್ಲಿ ರಂಗಿನ ಲೋಕವನ್ನೇ ಸೃಷ್ಠಿಸಿದವು.