DAKSHINA KANNADA
ಕ್ರಿಮಿನಲ್ ಗಳಿಗಿಲ್ಲವೇ ಪುತ್ತೂರು ಪೋಲೀಸರ ಭಯ…!?

ಪೋಲೀಸರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಬೆದರಿಸುತ್ತಿರುವುದು ಪೋಲೀಸರ ಮೇಲೆ ಯಾವುದೇ ಭಯವಿಲ್ಲ ಎನ್ನುವುದನ್ನು ತೋರಿಸಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಇದೀಗ ಕೇಳಿ ಬರಲಾರಂಭಿಸಿದೆ.
ಪುತ್ತೂರು : ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಪುತ್ತೂರು ಸೀನಿಯರ್ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನಾಲ್ವರು ಆರೋಪಿಗಳಿಗೆ ನವಂಬರ್ 22 ರ ತನಕ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಕೊಲೆ ನಡೆದ ಸ್ಥಳಕ್ಕೆ ಪೋಲೀಸರು ಸ್ಥಳ ಮಹಜರಿಗಾಗಿ ಕರೆ ತಂದಿದ್ದ ಸಮಯದಲ್ಲಿ ಅಕ್ಷಯ್ ಕಲ್ಲೇಗ ಗುಂಪಿನ ಸದಸ್ಯರು ಪೋಲೀಸರ ಸಮ್ಮುಖದಲ್ಲೇ ಆರೋಪಿಗಳಿಗೆ ಬೆದರಿಕೆ ಹಾಕಿದ್ದರು. ಹಿಂದೆ ಬರುತ್ತೀರಲ್ಲವೇ ನೋಡುತ್ತೇವೆ ಎಂದು ಕೊಲೆಗೆ ಪ್ರತಿಯಾಗಿ ಕೊಲೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು. ಪೋಲೀಸರ ಸಮ್ಮುಖದಲ್ಲೇ ಸಾರ್ವಜನಿಕವಾಗಿ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಬೆದರಿಸುತ್ತಿರುವುದು ಪೋಲೀಸರ ಮೇಲೆ ಯಾವುದೇ ಭಯವಿಲ್ಲ ಎನ್ನುವುದನ್ನು ತೋರಿಸಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಇದೀಗ ಕೇಳಿ ಬರಲಾರಂಭಿಸಿದೆ. ಪುತ್ತೂರಿನ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ಗುಂಪು ಕಟ್ಟಿ ಕುಳಿತುಕೊಳ್ಳುವುದು, ಕೆಲವು ಭಾಗದಲ್ಲಿ ನಿರಂತರವಾಗಿ ಮಾದಕದ್ರವ್ಯಗಳ ಬಳಕೆ ಮಾಡುತ್ತಿರುವ ವಿಚಾರ ಪೋಲೀಸರಿಗೆ ತಿಳಿಯದೆ ಇರದ ವಿಚಾರಗಳಲ್ಲ. ಪುತ್ತೂರು ಪೋಲೀಸರ ಮೇಲೆ ಕ್ರಿಮಿನಲ್ ಗಳಿಗೆ ಯಾವುದೇ ರೀತಿಯ ಭಯವಿಲ್ಲ ಎನ್ನುವುದು ಪುತ್ತೂರಿನಲ್ಲಿ ಈ ಹಿಂದೆ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿಯಾಗಿಯೂ ನಿಂತಿದೆ. ಒಂದೊಂದು ಠಾಣೆಯಲ್ಲಿ ಅಪರಾಧ ಪ್ರಕರಣಗಳನ್ನು ತಡೆಯಲೆಂದೇ ಸ್ಟೇಷನ್ ಎಸ್.ಬಿ ಗಳಿದ್ದು, ಘಟನೆ ನಡೆಯುವ ಮೊದಲೇ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸುವ ಜವಾಬ್ದಾರಿ ಎಸ್.ಬಿ ಗಳ ಮೇಲಿದೆ. ಆದರೆ ಈ ಸಿಬ್ಬಂದಿಗಳು ಅಪರಾಧ ತಡೆಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅಕ್ಷಯ್ ಕಲ್ಲೇಗ ಕೊಲೆಯ ಹಿಂದೆ ಇನ್ನೂ ಕೆಲವು ಆರೋಪಿಗಳೂ ಭಾಗಿಯಾಗಿದ್ದು, ಪ್ರಕರಣವನ್ನು ಪೋಲೀಸರು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಎನ್ನುವ ಒತ್ತಾಯಗಳೂ ಕೇಳಿ ಬರುತ್ತಿದೆ..