LATEST NEWS
ಮತ್ತೆ ರಾಹುಲ್ ಗಾಂಧಿಯಿಂದ ಅದೇ ಹಳೆ ಘೋಷಣೆ – ನಿರ್ಮಲಾ ಸೀತಾರಾಮನ್

ಮತ್ತೆ ರಾಹುಲ್ ಗಾಂಧಿಯಿಂದ ಅದೇ ಹಳೆ ಘೋಷಣೆ – ನಿರ್ಮಲಾ ಸೀತಾರಾಮನ್
ಉಡುಪಿ ಮಾರ್ಚ್ 26: ರಾಹುಲ್ ಗಾಂಧಿಯ ದೇಶದ ಬಡವರಿಗೆ ವಾರ್ಷಿಕ ಕನಿಷ್ಠ 72 ಸಾವಿರ ರೂಪಾಯಿ ಆದಾಯದ ಸ್ಕೀಮ್ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವ್ಯಂಗ್ಯವಾಡಿದ್ದಾರೆ. 1971ರ ಗರೀಬಿ ಹಠಾವೋ ಕಾಂಗ್ರೇಸ್ ನ ಜನಪ್ರಿಯ ಕಾರಣವಾಗಿದ್ದು, ದೇಶದಲ್ಲಿ ಇನ್ನೂ ಬಡತನ ಇರಲು ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ.
ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಿಯಾಂಕಾ ಗಾಂಧಿ ಅವರ ಟೀ ಶರ್ಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ನಾವು ಪ್ರಚಾರಕ್ಕೆ ತುಂಬಾ ಕೆಲಸ ಮಾಡುತ್ತೇವೆ. ಪ್ರಿಯಾಂಕಾ ಗಾಂಧಿ ಏನೇ ಆರೋಪ ಮಾಡಲಿ. ಬಿಜೆಪಿ ಟಿ ಶರ್ಟ್, ಆಪ್ ಮೂಲಕ ಮಾರಾಟವಾಗುತ್ತದೆ. ಇದರಲ್ಲಿ ತಪ್ಪೇನಿದೆ? ಇಂತಹದ್ದು ಇನ್ನೂ ಸಾಕಷ್ಟು ಮಾಡುತ್ತೇವೆ ಎಂದು ಪ್ರಿಯಾಂಕ ಗಾಂಧಿಗೆ ಟಾಂಗ್ ಕೊಟ್ಟರು.

ರಾಹುಲ್ ಗೆ ಸೋಲುವ ಭಯ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಅಮೇಥಿ ಲೋಕಸಭಾ ಕ್ಷೇತ್ರ ಅಲ್ಲದೇ ಬೇರೆ ಕ್ಷೇತ್ರಕ್ಕೆ ಪಲಾಯನ ಮಾಡುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಕುಟುಕಿದರು.
ನಾವು ಐದು ವರ್ಷ ಭ್ರಷ್ಟಾಚಾರ ರಹಿತ ಕೆಲಸ ಮಾಡಿದ್ದೇವೆ. ಎನ್‍ಡಿಎ ಜೊತೆ ಘಟಬಂಧನ್ ಹೋಲಿಕೆ ಮಾಡಬೇಡಿ. ನಮ್ಮ ಪ್ರಧಾನಿ ಮೋದಿಗೆ ಸರಿಸಾಟಿ ಯಾರಿದ್ದಾರೆ? ಚೋರ್ ಚೋರ್ ಕರೆಯಲು ನಿಮ್ಮಲ್ಲಿ ಏನಿದೆ ಸಾಕ್ಷಿ? ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಗಾಂಧಿಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಆಕ್ರೋಶ ಹೊರಹಾಕಿದರು.
ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಭೆಗಳಾಗಿದೆ. ಪ್ರಕರಣ ಕಡೆಗಣಿಸುವ ಮಾತೇ ಇಲ್ಲ. ನೌಕಾಪಡೆ, ಏರ್ ಫೋರ್ಸ್ ಜೊತೆ ಚರ್ಚೆ ಮಾಡಿದ್ದೇನೆ. ಬೆಂಗಳೂರು ಏರ್ ಶೋ ಪ್ರಕರಣ ಕೂಡ ಚರ್ಚೆಯಾಗಿದೆ. ನಾವು ನಮ್ಮ ಕರ್ತವ್ಯದಲ್ಲಿ ಲೋಪ ಎಸಗಿಲ್ಲ. ಚುನಾವಣಾ ಸಂದರ್ಭದಲ್ಲಿ ನಾನು ನೀತಿಸಂಹಿತೆ ಉಲ್ಲಂಘಿಸಲ್ಲ, ಏನೇನು ಮಾಡಿದ್ದೇವೆ ಎಲ್ಲವೂ ಹೇಳಲ್ಲ ಎಂದು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಕುಮಾರಸ್ವಾಮಿ, ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.