LATEST NEWS
ಕೊರಗಜ್ಜನ ಕಟ್ಟೆಯ ಹುಂಡಿಯ ಮೇಲೆ ಕಾಂಡೋಮ್ ಇಟ್ಟ ದುಷ್ಕರ್ಮಿಗಳು – ಭಾರೀ ಆಕ್ರೋಶ
ಮಂಗಳೂರು ಡಿಸೆಂಬರ್ 28: ಮಂಗಳೂರಿನಲ್ಲಿ ಮತ್ತೆ ಧಾರ್ಮಿಕ ಕ್ಷೇತ್ರಗಳ ಅಪವಿತ್ರಗೊಳಿಸಲು ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದು, ಇದೀಗ ಮಾರ್ನಮಿಕಟ್ಟೆ ಬಳಿಯ ಕೊರಗಜ್ಜನ ಕಟ್ಟೆ ಹುಂಡಿಗೆ ಉಪಯೋಗಿಸಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸಲಾಗಿದೆ.
ಇಂದು ಬೆಳಿಗ್ಗೆ ಭಕ್ತರು ದರ್ಶನಕ್ಕೆ ಬಂದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದ್ದು, ಕಟ್ಟೆಯ ಬಳಿ ಇರುವ ಸಿಸಿಟಿವಿ ಕ್ಯಾಮರಾದಲ್ಲಿ ಇಬ್ಬರು ದುಷ್ಕರ್ಮಿಗಳು ಆಗಮಿಸಿ ಈ ಕೃತ್ಯ ಎಸಗಿರುವ ವಿಡಿಯೋ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಾರ್ವಜನಿಕರು ಆಗಮಿಸಿದ್ದು, ಆರೋಪಿಗಳನ್ನು ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದರು. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇನ್ನು ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಕೊರಗಜ್ಜ ಕ್ಷೇತ್ರದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸುವ ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶಾಂತಿಯುತವಾಗಿರುವ ಕರಾವಳಿಯನ್ನು ಇಂತಹ ಕೃತ್ಯಗಳ ಮೂಲಕ ಕೋಮುಗಲಭೆಗೆ ಪ್ರಚೋದಿಸುವ ಶಕ್ತಿಗಳನ್ನು ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಪ್ರಶಾಂತವಾಗಿರುವ ಕರಾವಳಿಯಲ್ಲಿ ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸಿದರೆ ಅದನ್ನು ಕಂಡು ಸುಮ್ಮನೆ ಇರಲಾಗದು. 4 ವರ್ಷಗಳಲ್ಲಿ ಕೋಮುಗಲಭೆಗಳು ನಡೆದಿಲ್ಲ. ಮುಂದೆಯೂ ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.