BANTWAL
ರೋಡ್ ಚಾಲೆಂಜ್ ನಡುವೆ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಭಾಗ್ಯ…..!!
ಬಂಟ್ವಾಳ : ಹೊಂಡಗುಂಡಿಗಳಿಂದ ತುಂಬಿ ಸಂಚಾರ ದುರಸ್ತವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಿ.ಸಿ.ರೋಡು-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ತೇಪೆ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎನ್‌ಎಚ್‌ಎಐ ಕೈಗೆತ್ತಿಕೊಂಡಿದೆ. ಬಿ.ಸಿ.ರೋಡ್ ನಿಂದ ಕಾಮಗಾರಿ ಆರಂಭಿಸಿದ್ದು, ಅಡ್ಡಹೊಳೆಯವರೆಗೂ ಈ ಕಾರ್ಯ ಮುಂದುವರಿಯಲಿದೆ.
ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯ ಕುರಿತು ವಾಹನ ಚಾಲಕರು, ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ಕಾಂಗ್ರೇಸ್ ಯುವ ನಾಯಕ ಮಿಥುನ್ ರೈ ನೇತೃತ್ವದಲ್ಲಿ ರೋಡ್ ಚಾಲೆಂಜ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭಿಸಲಾಗಿತ್ತು. ರೋಡ್ ಚಾಲೆಂಜ್ ಗೆ ಸಾರ್ವಜನಿಕರಿಂದ ಅಭೂತ ಪೂರ್ವ ಬೆಂಬಲ ಕೂಡ ವ್ಯಕ್ತವಾಗಿತ್ತು.
ಈ ಹಿನ್ನಲೆ ಎಚ್ಚತ್ತ ಎನ್ ಎಚ್ ಐ ಬಿ.ಸಿ.ರೋಡಿನ ಹಳೆ ಟೋಲ್‌ಗೇಟ್ ಬಳಿ ಪಾಣೆಮಂಗಳೂರು ಬಳಿ ಯಿಂದ ಕಾಮಗಾರಿ ಪ್ರಾರಂಭಗೊಂಡಿದ್ದು, ಬೃಹತ್ ಹಾಗೂ ಸಣ್ಣ ಹೊಂಡಗಳನ್ನು ಮುಚ್ಚಲಾಗುತ್ತಿದೆ. ಕಾಮಗಾರಿ ನಡೆಸುವ ಸಿಬಂದಿಯ ಮಾಹಿತಿ ಪ್ರಕಾರ ಹಿಂದೂಸ್ಥಾನ್ ಕನ್‌ಸ್ಟ್ರಕ್ಷನ್ಸ್ ಕಂಪೆನಿಯು ಕಾಮಗಾರಿ ನಡೆಸುತ್ತಿದ್ದು, ಅಡ್ಡಹೊಳೆವರೆಗೂ ಕಾಮಗಾರಿ ನಡೆಸುತ್ತೇವೆ.
ಮಳೆ ಬಂದರೂ, ಹೆದ್ದಾರಿ ತೇಪೆ ಎದ್ದು ಹೋಗದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಸಿಬಂದಿ ತಿಳಿಸಿದ್ದಾರೆ. ಪ್ರಸ್ತುತ ಹೆದ್ದಾರಿಯ ತೇಪೆ ಕಾರ್ಯದಿಂದ ವಾಹನ ಚಾಲಕರು/ ಸವಾರರು ಕೊಂಚ ನಿರಾಳರಾಗಿದ್ದು, ಆದರೆ ಮತ್ತೆ ಮಳೆ ಬಂದರೂ ಹೊಂಡಗಳು ಕಾಣಿಸಿಕೊಳ್ಳದ ರೀತಿಯಲ್ಲಿ ಎನ್‌ಎಚ್‌ಎಐ ಕ್ರಮಕೈಗೊಳ್ಳಬೇಕಿದೆ.
ಜತೆಗೆ ಕೆಲವೊಂದು ಭಾಗಗಳಲ್ಲಿ ಹೆದ್ದಾರಿಯಲ್ಲೇ ನೀರು ನಿಂತು ಹೊಂಡ ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನೂ ಸರಿಪಡಿಸಬೇಕಿದೆ. ಬಿ.ಸಿ.ರೋಡು ಜಂಕ್ಷನ್ ಪ್ರದೇಶದಲ್ಲೂ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳಿದ್ದು, ಅವುಗಳ ತೇಪೆ ಕಾರ್ಯಕ್ಕೂ ಎನ್‌ಎಚ್‌ಎಐ ಮುಂದಾಗಬೇಕಿದೆ ಎಂದು ಆಗ್ರಹಗಳು ಕೇಳಿಬರುತ್ತಿದೆ.