LATEST NEWS
ಸಿಸಿಟಿವಿ ಹಾಕಿದ ಮೇಲೆ ಈ ಬಾರಿ ಎಸ್ಎಸ್ಎಲ್ ಸಿಯ ನೈಜ ಫಲಿತಾಂಶ ಬಂದಿದೆ – ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ
ಮಂಗಳೂರು, ಮೇ 19: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಸಿಸಿಟಿವಿ ಬಳಸಿದ್ದರಿಂದ ನೈಜ ಫಲಿತಾಂಶ ಬಂದಿದ್ದು, ಉಡುಪಿ ಮಂಗಳೂರು ಪ್ರಥಮ ಹಾಗೂ ದ್ವಿತಿಯ ಸ್ಥಾನ ಪಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದು, ಈ ಮೂಲಕ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ.
ಮಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಕಲು ಆಗುತ್ತಿರುವ ಶಂಕೆಯಲ್ಲಿ ಪರೀಕ್ಷಾ ಕೊಠಡಿಗಳಿಗೆ ಸಿಸಿಕ್ಯಾಮೆರಾ ಅಳವಡಿಸಬೇಕೆಂದು ಪರಿಷತ್ತಿನಲ್ಲಿ ಆಗ್ರಹ ಮಾಡಿದ್ದೆವು. ಹಾಗಾಗಿ, ಈ ಬಾರಿ ಸರಕಾರ ಪರೀಕ್ಷಾ ಹಾಲ್ ಗಳಲ್ಲಿ ಸಿಸಿ ಕ್ಯಾಮೆರಾ ಇಟ್ಟು ನಿಗಾ ವಹಿಸಲಾಗಿತ್ತು. ಇದರಿಂದಾಗಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಬಂದಿದೆ. ಇದು ಶಾಲಾ ಮಕ್ಕಳ ಕಲಿಕೆಯ ನೈಜ ಫಲಿತಾಂಶವನ್ನು ತೋರಿಸಿದೆ ಎಂದು ಹೇಳಿದರು. ಸಾಮೂಹಿಕ ನಕಲು ಆಗುತ್ತಿರುವ ಬಗ್ಗೆ ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ಕೂಡ ಹೇಳಿದ್ದರು. ನೀವು ಯಾಕೆ ಇದರ ಬಗ್ಗೆ ಸರಕಾರದಿಂದ ತನಿಖೆ ಮಾಡಿಸಿಲ್ಲ ಎಂದು ಕೇಳಿದ ಪ್ರಶ್ನೆಗೆ, ನಾವು ವಿಧಾನ ಪರಿಷತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ಈ ಸಲ ಕಟ್ಟುನಿಟ್ಟು ಆಗಿದೆ. ನೈಜ ಫಲಿತಾಂಶ ಬಂದಿದೆ ಎಂದರು.