LATEST NEWS
ಪ್ರೆಯಸಿಯನ್ನು ಕೊಂದು 35 ಪೀಸ್ ಮಾಡಿ ಎಸೆದ ಲವರ್….!!

ನವದೆಹಲಿ: ಮನೆಯವರ ವಿರೋಧ ಕಟ್ಟಿಕೊಂಡು ಯುವಕನೊಬ್ಬನೊಂದಿಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿದ್ದ ಯುವತಿಯೊಬ್ಬಳು ಹೆಣವಾಗಿದ್ದಾಳೆ. ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಿಯಕರ ಬೇರೆ ಬೇರೆ ಪ್ರದೇಶಗಳಲ್ಲಿ ದೇಹದ ಭಾಗಗಳನ್ನು ಹೂತು ಹಾಕಿದ್ದಾನೆ.
ಈ ಘಟನೆ ನಡೆದಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ, ಈ ಅಮಾನುಷ ಕೃತ್ಯ ಎಸಗಿದ 5 ತಿಂಗಳ ಬಳಿಕ ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಅಫ್ತಾಬ್ ಅಮೀನ್ ಪೂನವಾಲಾ ಎಂದು ಗುರುತಿಸಲಾಗಿದೆ. ಆತ ಹತ್ಯೆಗೀಡಾದ ಯುವತಿ ಶ್ರದ್ಧಾ (26) ಜೊತೆ ಲಿವ್ ಇನ್ ರಿಲೇಶನ್‌ನಲ್ಲಿ ಇದ್ದ. ಯುವತಿ ತನಗೆ ಯಾವಾಗಲೂ ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಈ ವಿಚಾರವಾಗಿ ಆಗಾಗ ಜಗಳವಾಗುತ್ತಿದ್ದರಿಂದ ಮೇ 18 ರಂದು ಆತ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ.
ಕೊಲೆ ಬಳಿಕ ಆರೋಪಿ ಯುವತಿಯ ದೇಹವನ್ನು ಹರಿತವಾದ ಆಯುಧಗಳಿಂದ 35 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಅವುಗಳನ್ನು ದೆಹಲಿಯ ಮೆಹ್ರೌಲಿ (Mehrauli) ಅರಣ್ಯದ ವಿವಿಧ ಪ್ರದೇಶಗಳಲ್ಲಿ ಹೂತುಹಾಕಿದ್ದಾನೆ. ದೇಹದ ಭಾಗಗಳನ್ನು ಎಸೆಯಲು ಆತ ಪ್ರತಿ ದಿನ ಮುಂಜಾನೆ 2 ಗಂಟೆ ವೇಳೆ ಮನೆಯಿಂದ ಹೊರ ಹೋಗುತ್ತಿದ್ದ. ಆತ ಎಲ್ಲಾ ತುಂಡುಗಳನ್ನು ಎಸೆಯಲು 18 ದಿನಗಳನ್ನು ತೆಗೆದುಕೊಂಡಿದ್ದಾನೆ. ಮಾತ್ರವಲ್ಲದೇ ದೇಹದ ತುಂಡುಗಳನ್ನು ಇಡಲು ಆತ ಫ್ರಿಡ್ಜ್ ಅನ್ನು ಖರೀದಿಸಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಯುವತಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪೂನಾವಾಲಾನನ್ನು ಶನಿವಾರ ಬಂಧಿಸಿದ್ದಾರೆ. ಬಳಿಕ ನಡೆದ ಘಟನೆಯನ್ನೆಲ್ಲಾ ಆತ ಬಾಯಿಬಿಟ್ಟಿದ್ದಾನೆ. ಇದೀಗ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು, ಶ್ರದ್ಧಾ ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ