LATEST NEWS
ನಾನು ಉಟ್ಟ ಬಟ್ಟೆಯಲ್ಲೇ ದೇಶ ತೊರೆದಿದ್ದೆ..ಹಣದ ಆರೋಪವನ್ನು ತಳ್ಳಿ ಹಾಕಿದ ಅಪ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ
ಯುಎಇ ಅಗಸ್ಟ್ 19: ತಾಲಿಬಾನ್ ಅಪ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ದೇಶದಿಂದ ನಾಪತ್ತೆಯಾಗಿದ್ದ ಅಪ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ತಮ್ಮ ಮೇಲಿದ್ದ ಹಣದ ಆರೋಪವನ್ನು ಅಲ್ಲಗೆಳೆದಿದ್ದಾರೆ.
ಘನಿ 169 ದಶಲಕ್ಷ ಅಮೆರಿಕನ್ ಡಾಲರ್‌ನಷ್ಟು (₹1,256 ಕೋಟಿ) ಹಣದೊಂದಿಗೆ ಪಲಾಯನ ಮಾಡಿರುವುದಾಗಿ ತಜಕಿಸ್ತಾನದಲ್ಲಿರುವ ಅಫ್ಗಾನಿಸ್ತಾನದ ರಾಯಭಾರಿ ಆರೋಪ ಮಾಡಿದ್ದರು. ಈ ಆರೋಪಗಳಿಗೆ ಸ್ಪಷ್ಟನೆ ನೀಡಲು ಬುಧವಾರ ತಡರಾತ್ರಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಘನಿ, ತಾವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇರುವುದನ್ನು ದೃಢಪಡಿಸಿದರು. ಹಣ ವರ್ಗಾಯಿಸಿರುವುದಾಗಿ ಆರೋಪಿಸಲಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ’ ಎಂದು ಅವರು ಹೇಳಿದ್ದಾರೆ.
ನಾನು ಧರಿಸಿದ್ದ ಒಂದು ಸಾಂಪ್ರದಾಯಿಕ ಉಡುಪು, ಒಂದು ನಿಲುವಂಗಿ, ಒಂದು ಜೊತೆಗೆ ಚಪ್ಪಲಿಯೊಂದಿಗೆ ನಾನು ದೇಶ ತೊರೆಯಬೇಕಾಯಿತು,’ ಎಂದು ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.
ಸಂಭಾವ್ಯ ರಕ್ತಪಾತವನ್ನು ತಡೆಯುವ ಏಕೈಕ ಉದ್ದೇಶದಿಂದ ತಾವು ದೇಶವನ್ನು ತೊರೆದಿದ್ದಾಗಿ ಘನಿ ವಿಡಿಯೊದಲ್ಲಿ ವಿವರಿಸಿದ್ದಾರೆ. ತಮ್ಮ ವಿಡಿಯೊ ಸಂದೇಶದಲ್ಲಿ ಘನಿ, ಅಫ್ಗನ್ ಭದ್ರತಾ ಪಡೆಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಶಾಂತಿ ಪ್ರಕ್ರಿಯೆಯ ವೈಫಲ್ಯ’ದಿಂದಾಗಿ ತಾಲಿಬಾನ್ ಅಧಿಕಾರವನ್ನು ಕಸಿದುಕೊಂಡಿತು ಎಂದು ಅವರು ಹೇಳಿದ್ದಾರೆ.