LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದು ನಿಜವಾದ ಬಾಂಬ್….!!

ಬಾಂಬರ್ ಆದಿತ್ಯರಾವ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಆದಿತ್ಯರಾವ್ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದು ನಿಜವಾದ ಸ್ಪೋಟಕವಾಗಿದ್ದು ಜನರಲ್ಲಿ ಭಯ ಹುಟ್ಟಿಸುವ ಹಿನ್ನಲೆ ಈ ಬಾಂಬ್ ಇಟ್ಟಿದ್ದ ಎಂದು ತಿಳಿಸಲಾಗಿದೆ.
2020ರ ಜನವರಿ 20ರಂದು ಮಂಗಳೂರು ಏರ್ ಪೋರ್ಟ್‍ನಲ್ಲಿ ಬಾಂಬ್ ಪತ್ತೆಯಾಗಿದ್ದು, ಈ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಎಲ್ಲಾ ವಿಮಾನ ನಿಲ್ಧಾನದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಆರೋಪಿ ಆದಿತ್ಯರಾವ್ ನಢರವಾಗಿ ಬೆಂಗಳೂರಿಗೆ ಬಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರ ಕಚೇರಿಗೆ ತೆರಳಿ ಶರಣಾಗಿದ್ದನು. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಾನೇ ಬಾಂಬ್ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದನು.

ಪ್ರಕರಣದ ತನಿಖೆ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಮುಕ್ತಾಯಗೊಂಡು ಆರೋಪ ಪಟ್ಟಿ ಸಿದ್ಧವಾಗಿತ್ತು ನಂತರ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ರಾಜ್ಯ ಸರ್ಕಾರದ ಅನುಮತಿಗಾಗಿ ಕಳುಹಿಸಲಾಗಿತ್ತು. ಈಗ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗಳಿಂದ ಪೂರ್ವಾನುಮತಿ ಪತ್ರ ಬಂದಿದೆ ಎಂದು ತನಿಖಾಧಿಕಾರಿಯಾಗಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು.ಬೆಳ್ಳಿಯಪ್ಪ ತಿಳಿಸಿದ್ದಾರೆ.
ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆರೋಪಿ ಆದಿತ್ಯರಾವ್ ವಿರುದ್ಧ ಸ್ಥಳೀಯ ಪೋಲಿಸರ ವಿಶೇಷ ತನಿಖಾ ತಂಡ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್‍ಶೀಟ್‍ನಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಆರೋಪಿ ಇಟ್ಟಿದ್ದ ಬ್ಯಾಗ್ ನಲ್ಲಿ ಇದ್ದದ್ದು ನಿಜವಾದ ಸ್ಫೋಟಕವಾಗಿದೆ. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆದಿತ್ಯರಾವ್ ಬಾಂಬ್ ಇಟ್ಟಿದ್ದ ಎಂದು ತಿಳಿಸಲಾಗಿದೆ. ಅಲ್ಲದೆ ಅಮೋನಿಯಂ ನೈಟ್ರೇಟ್, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆ ಅಳವಡಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಒಂದು ವೈಯರ್ ಸಂಪರ್ಕಿಸದೆ ಆರೋಪಿ ಹಾಗೆಯೇ ಬಿಟ್ಟಿದ್ದ. ಇದು ನಿಜವಾದ ಸ್ಫೋಟಕ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸಾಬೀತಾಗಿದೆ. ಆರೋಪಿ ವಿರುದ್ಧ ಯು.ಎ.ಪಿ.ಎ ಅಡಿ ಪ್ರಕರಣ ದಾಖಲಿಸಿ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.