DAKSHINA KANNADA
ಮೇರು ನಟ ‘ಅನಂತನಾಗ್’ 5 ದಶಕಗಳ ಚಿತ್ರಜೀವನ ಯುವಪೀಳಿಗೆಗೆ ಮಾದರಿ- ಶಾಸಕ ಕಾಮತ್
ಈ ದೇಶದ ಮಹಾನ್ ಕಲಾವಿದರಲ್ಲಿ ‘ಅನಂತನಾಗ್’ ಕೂಡ ಒಬ್ಬರು. ಅವರ ಐದು ದಶಕಗಳ ಚಿತ್ರಜೀವನ ಯುವಪೀಳಿಗೆಗೆ ಮಾದರಿ.
ಮಂಗಳೂರು : ಈ ದೇಶದ ಮಹಾನ್ ಕಲಾವಿದರಲ್ಲಿ ಅನಂತನಾಗ್ ಕೂಡ ಒಬ್ಬರು. ಅವರ ಐದು ದಶಕಗಳ ಚಿತ್ರಜೀವನ ಯುವಪೀಳಿಗೆಗೆ ಮಾದರಿ.ಅವರ 75 ನೇ ವರ್ಷದ ಜನ್ಮದಿನವನ್ನು ಮಂಗಳೂರಿನಲ್ಲಿ ಅವರ ಉಪಸ್ಥಿತಿಯಲ್ಲಿಯೇ ಆಚರಿಸಲು ನಮಗೆ ಅವರು ಅವಕಾಶ ನೀಡಿರುವುದು ನಮ್ಮ ಅದೃಷ್ಟ.
ಅಂತಹ ಶ್ರೇಷ್ಟ ವ್ಯಕ್ತಿತ್ವವನ್ನು ಗೌರವಿಸುವುದು ನಮ್ಮ ಭಾಗ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದ್ದಾರೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನದ ಗೌರವಾಧ್ಯಕ್ಷರಾಗಿರುವ ವೇದವ್ಯಾಸ ಕಾಮತ್ ಅವರು ಸಮಾನ ಮನಸ್ಕ ಅನಂತನಾಗ್ ಅವರ ಅಭಿಮಾನಿಗಳ ಜೊತೆಗೂಡಿ ಇದೇ ಸೆಪ್ಟೆಂಬರ್ 3 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ.ರಮಣ್ ಪೈ ಸಭಾಂಗಣದಲ್ಲಿ ಅನಂತ ಅಭಿನಂದನೆ ಕಾರ್ಯಕ್ರಮಕ್ಕೆ ಎಲ್ಲಾ ಅನಂತನಾಗ್ ಅಭಿಮಾನಿಗಳನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಾಮತ್ ಅವರು ಅನಂತನಾಗ್ ಅವರಂತಹ ಸೃಜನಶೀಲ ವ್ಯಕ್ತಿ ಸಿನೆಮಾರಂಗದಲ್ಲಿ ತಮ್ಮ ಸಹಜ ಅಭಿನಯ, ಉತ್ತಮ ಕಥಾವಸ್ತು ಮತ್ತು ಶ್ರೇಷ್ಟ ಸಂದೇಶ ಸಾರುವ ಅಂಶಗಳ ಮೂಲಕ ನಮ್ಮೆಲ್ಲರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ತಾನು ಕೂಡ ಅನಂತನಾಗ್ ಅಭಿಮಾನಿಯಾಗಿದ್ದು, ನಮ್ಮ ಕುಡ್ಲ ಸಾಂಸ್ಕೃತಿಕ ಪ್ರತಿಷ್ಟಾನ ಎಲ್ಲಾ ಅನಂತನಾಗ್ ಅಭಿಮಾನಿಗಳ ಪರವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.
ಇದು ಅನಂತನಾಗ್ ಅವರ ಪ್ರತಿ ಅಭಿಮಾನಿಯ ಮನೆಮನದ ಕಾರ್ಯಕ್ರಮವಾಗಿದ್ದು ಎಲ್ಲರಿಗೂ ಪ್ರೀತಿಪೂರ್ವಕ ಸ್ವಾಗತ ಎಂದು ತಿಳಿಸಿದರು.
ಸಪ್ಟೆಂಬರ್ 3 ರಂದು ಬೆಳಿಗ್ಗೆ ಡೊಂಗರಕೇರಿ ಕೆನರಾ ಹೈಸ್ಕೂಲ್ ಆವರಣದಿಂದ ಅದ್ದೂರಿ ಮೆರವಣಿಗೆಯಲ್ಲಿ ಅನಂತನಾಗ್ ದಂಪತಿಯನ್ನು ಸಭಾಂಗಣಕ್ಕೆ ಕರೆದುಕೊಂಡು ಬರಲಾಗುವುದು.
ಬೆಳಿಗ್ಗೆ ಉದ್ಘಾಟನೆಯ ಬಳಿಕ ಸಿನೆಮಾ, ಕಿರುತೆರೆ, ಹಿರಿಯ ಪತ್ರಕರ್ತರು, ಗಣ್ಯರು, ವಿದ್ಯಾರ್ಥಿ ಸಮುದಾಯದೊಂದಿಗೆ ಸಂವಾದ, ಮಧ್ಯಾಹ್ನ ಅನಂತನಾಗ್ ಹಿಟ್ ಹಾಡುಗಳ ರಸಮಂಜರಿ, ಸಂಜೆ ನೃತ್ಯ ವೈವಿಧ್ಯ ಮತ್ತು ನಾಡಿನ ಗಣ್ಯರಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕಾಂತಾರಾ ಖ್ಯಾತಿಯ ರಿಷಬ್ ಶೆಟ್ಟಿ ಅವರು ಭಾಗವಹಿಸಲಿದ್ದಾರೆ. ಎಲ್ಲಾ ಕಾರ್ಯಕ್ರಮಕ್ಕೆ ದಿನವೀಡಿ ಸಾರ್ವಜನಿಕರಿಗೆ ಮುಕ್ತ ಸ್ವಾಗತವಿದೆ ಎಂದು ಶಾಸಕ ಕಾಮತ್ ಅವರು ತಿಳಿಸಿದ್ದಾರೆ.