LATEST NEWS
ಆ್ಯಸಿಡ್ ದಾಳಿ ಸಂತ್ರಸ್ಥೆ ಸ್ವಪ್ನಾ ಚಿಕಿತ್ಸಾ ವೆಚ್ಚ ಸರಕಾರದಿಂದ ಭರಿಸಲು ಕ್ರಮ – ಕೋಟ ಶ್ರೀನಿವಾಸ ಪೂಜಾರಿ

ಆ್ಯಸಿಡ್ ದಾಳಿ ಸಂತ್ರಸ್ಥೆ ಸ್ವಪ್ನಾ ಚಿಕಿತ್ಸಾ ವೆಚ್ಚ ಸರಕಾರದಿಂದ ಭರಿಸಲು ಕ್ರಮ – ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಬಾವನಿಂದಲೇ ಆಸಿಡ್ ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡು ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಡಬ ತಾಲೂಕಿನ ಕೋಡಿಂಬಾಳದ ನಿವಾಸಿ ಸ್ವಪ್ನಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಬಿಜೆಪಿ ನಿಯೋಗ ಭೇಟಿಯಾಗಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು, ಆಸಿಡ್ ಸಂತ್ರಸ್ಥೆಗೆ ಧೈರ್ಯ ತುಂಬಿದ ನಿಯೋಗ ಸಕಲ ನೆರವು ನೀಡುವುದಾಗಿ ವಾಗ್ದಾನ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಇದೊಂದು ಘೋರ ಕೃತ್ಯ ವಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ವಪ್ನ ಕುಟುಂಬ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಸಂತ್ರಸ್ಥೆಗೆ ಚಿಕಿತ್ಸಾ ವೆಚ್ಚವೇ 5 ಲಕ್ಷ ರೂಪಾಯಿ ಆಗಲಿದ್ದು ಇದನ್ನು ಸರ್ಕಾರದಿಂದ ಭರಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಭೂ ವಿವಾದಕ್ಕೆ ಸಂಬಂಧ ಪಟ್ಟಂತೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಶೀಘ್ರವೇ ಸಂತ್ರಸ್ಥೆ ಮಹಿಳೆಗೆ ನಿವೇಶವನ್ನು ಮಂಜೂರು ಮಾಡುವಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಂಗಳೂರಿನ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಜಗದೀಶ್ ಶೇಣವ, ಮತ್ತಿತರ ಬಿಜೆಪಿ ನಿಯೋಗದಲ್ಲಿದ್ದರು.
ಇದಕ್ಕೂ ಮುನ್ನ ಸಂತ್ರಸ್ಥೆಯನ್ನು ಭೇಟಿ ಮಾಡಿದ ವಿಶ್ವ ಹಿಂದೂಪರಿಷತ್ ನಿಯೋಗ 1 ಲಕ್ಷ ಧನ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದೆ. ಅದೂ ಅಲ್ಲದೆ ಸಂತ್ರಸ್ಥೆಯ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದೆ.