LATEST NEWS
ಬೆಂದೂರ್ ವೆಲ್ ಸರ್ಕಲ್ ನಲ್ಲಿ ಮತ್ತೊಂದು ಅಪಘಾತ – ಮಹಿಳೆ ಬಲಿ ಪಡೆದ ಖಾಸಗಿ ಬಸ್

ಮಂಗಳೂರು ಮಾರ್ಚ್ 30: ಮಂಗಳೂರಿನಲ್ಲಿ ಖಾಸಗಿ ಬಸ್ ಗಳು ಕಿಲ್ಲರ್ ಬಸ್ ಗಳಾಗಿ ಪರಿವರ್ತನೆ ಆಗುತ್ತಿದ್ದು, ಮೊನ್ನೆಯಷ್ಟೇ ಬಾಲಕನೊಬ್ಬನನ್ನು ಬಲಿ ಪಡೆದಿದ್ದ ಜಾಗದಲ್ಲೇ ಇಂದು ಮಹಿಳೆಯೊಬ್ಬರನ್ನು ಖಾಸಗಿ ಬಸ್ ಬಲಿ ಪಡೆದಿದೆ.
ಮೃತರನ್ನು ಐರಿನ್ ಡಿಸೋಜ(55) ಎಂದು ಗುರುತಿಸಲಾಗಿದೆ. ಆ್ಯಗ್ನೆಸ್ ಸರ್ಕಲ್ ಕಡೆಯಿಂದ ಬಂದ ಸಿಟಿ ಬಸ್ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದೆ. ಈ ವೇಳೆ ಅದೇ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಐರಿನ್ ಅವರ ಮೈಮೇಲೆ ಬಸ್ಸಿನ ಮುಂಭಾಗದ ಚಕ್ರ ಹರಿದಿದೆ. ಇದರಿಂದ ತೀವ್ರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಚಾಲಕ ಬಸ್ ನೊಂದಿಗೆ ಪರಾರಿಯಾಗಿದ್ದಾನೆ. ಬಸ್ ಪತ್ತೆ ಹಚ್ಚಲು ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ. ಖಾಸಗಿ ಬಸ್ ನ ಧಾವಂತಕ್ಕೆ ಒಂದು ವಾರದ ನಡುವೆ ಎರಡನೇ ಘಟನೆ ಇದಾಗಿದೆ.

ಮಂಗಳೂರು ನಗರದಲ್ಲಿ ಬಸ್ ಗಳ ಮೇಲಾಟ ದಿನೇ ದಿನೇ ಜಾಸ್ತಿಯಾಗುತ್ತಿದ್ದು ಕಿಲ್ಲರ್ ಬಸ್ ಗಳ ಧಾವಂತಕ್ಕೆ ಅಮಾಯಕರು ಬಲಿಯಾಗುತ್ತಿದ್ದಾರೆ. ನಗರದ ಬೆಂದೂರು ಬಳಿ ಮೊನ್ನೆ ತಾನೆ ತಾಯಿ- ಮಗು ಪ್ರಯಾಣಿಸುತ್ತಿದ್ದ ಸ್ಕೂಟಿ ಮೇಲೆ ಬಸ್ ಹರಿದು ಮಗು ದಾರುಣವಾಗಿ ಮೃತಪಟ್ಟ ಸ್ಥಳದಲ್ಲೇ ಇಂದು ಮದ್ಯಾಹ್ನ ಮತ್ತೊಂದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಸಂಚಾರಿ ಎಸಿಪಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದು, ಈ ಸಂದರ್ಭ ಸಾರ್ವಜನಿಕರು ಪೋಲಿಸರನ್ನ ತರಾಟೆಗೆ ತಗೊಂಡಿದ್ದಾರೆ.