KARNATAKA
ಸೆಲ್ಫಿ ತೆಗೆಯಲು ಹೋದ ಯುವಕ ಚಿರತೆ ದಾಳಿಗೆ ಬಲಿ

ಮೈಸೂರು, ಅಕ್ಟೋಬರ್ 31: ಚಿರತೆ ದಾಳಿಗೆ ಬೆಟ್ಟದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಯುವಕ ಬಲಿಯಾಗಿರುವ ಘಟನೆ ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ. ಎಂ.ಎಲ್.ಹುಂಡಿ ಗ್ರಾಮದ ಮಂಜುನಾಥ್ (20) ಮೃತ ಯುವಕ.
ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್, ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ತಿ.ನರಸೀಪುರ ತಾಲೂಕಿನ ಉಕ್ಕಲಗೆರೆ ಗ್ರಾಮದ ಮಲ್ಲಿಕಾರ್ಜುನಸ್ವಾಮಿ ಬೆಟ್ಟಕ್ಕೆ ತೆರಳಿದ್ದರು. ಈ ವೇಳೆ ಬೆಟ್ಟದ ಸಮೀಪ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಯುವಕನ ಮೇಲೆ ಚಿರತೆ ಹಠಾತ್ ದಾಳಿ ನಡೆಸಿದೆ.

ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ