DAKSHINA KANNADA
ಸುಬ್ರಹ್ಮಣ್ಯ ಷಷ್ಟಿ ಮಹೋತ್ಸದಲ್ಲಿ ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನಿಗೆ ಸುಬ್ರಹ್ಮಣ್ಯ ಪೋಲಿಸ್ ಸಿಬ್ಬಂದಿಯಿಂದ ಹಲ್ಲೆ ಆರೋಪ; ಯುವಕ ಕಡಬ ಆಸ್ಪತ್ರೆಗೆ ದಾಖಲು
ಕಡಬ, ಡಿಸೆಂಬರ್ 01: ಸುಬ್ರಹ್ಮಣ್ಯ ಪಂಚಮಿ ಜಾತ್ರೆಯಂದು ಜ್ಯೂಸ್ ಮತ್ತು ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದ ಕಡಬದ ಯುವಕನೋರ್ವನಿಗೆ ಸುಬ್ರಹ್ಮಣ್ಯ ಪೋಲಿಸ್ ಠಾಣೆಯ ಸಿಬ್ಬಂದಿಯೋರ್ವರು ಹಣ ನೀಡುವಂತೆ ಒತ್ತಾಯಿಸಿ, ಯುವಕನನ್ನು ಪೋಲಿಸ್ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಯುವಕ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಬ್ರಹ್ಮಣ್ಯ ಎಸ್.ಐ. ಮಂಜುನಾಥ್ ಪೋಲಿಸ್ ಸಿಬ್ಬಂದಿಯಿಂದ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಕುಟ್ರುಪಾಡಿ ಗ್ರಾಮದ ಬೀಮಗುಂಡಿ ನಿವಾಸಿ ಶಶಿಕಿರಣ್ ಎಂಬವರು ಪೋಲಿಸ್ ಸಿಬ್ಬಂದಿಯಿಂದ ಹಲ್ಲೆಗೊಳಗಾಗಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವವರು. ಈ ಬಗ್ಗೆ ಹೇಳಿಕೆ ನೀಡಿರುವ ಶಶಿಕಿರಣ್ ಅವರು ಚಂಪಾಷಷ್ಠಿಯಂದು ನಾನು ಜ್ಯೂಸ್ ಮತ್ತು ಐಸ್ ಕ್ರೀಂ ವ್ಯಾಪಾರ ಮಾಡುತ್ತಿದ್ದು, ಪಂಚಮಿಯ ರಾತ್ರಿ 12 ಗಂಟೆ ಸುಮಾರಿಗೆ ಸ್ಟಾಲಿಗೆ ಬಂದ ಪೋಲಿಸ್ ಸಿಬ್ಬಂದಿ ಬೀಮಣ್ಣ ಗೌಡ ಎಂಬವರು 5 ಸಾವಿರ ಹಣ ನೀಡುವಂತೆ ಒತ್ತಾಯಿಸಿದ್ದು, ಈ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂದಿಗೆ ನಾನು ಹೆದರಿ 1000 ನೀಡಿದ್ದೇನೆ. ಈ ಹಣ ಸಾಕಾಗುವುದಿಲ್ಲ, 5000 ನೀಡುವಂತೆ ಪೋಲಿಸ್ ಸಿಬ್ಬಂದಿ ಬೆದರಿಸಿದ್ದು ಅಷ್ಟು ಹಣ ನೀಡದಿದ್ದಾಗ ನನ್ನನ್ನು ಠಾಣೆಯ ವಸತಿ ಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ, ಅಲ್ಲದೆ ನಾನು ವ್ಯಾಪಾರಕ್ಕೆ ಇಟ್ಟಿದ್ದ ಸಾಮಾಗ್ರಿಗಳನ್ನು ಇತರ ವ್ಯಕ್ತಿಗಳಿಂದ ಹಾಗೂ ನನ್ನ ತಲೆಯಲ್ಲಿ ಹೊರಿಸಿ ಪೋಲಿಸ್ ವಸತಿಗೃಹಕ್ಕೆ ಕಳಿಸಿದ್ದಾರೆ, ವಸತಿ ಗೃಹದಲ್ಲಿ ನನ್ನನ್ನು ಕುಳ್ಳಿರಿಸಿ ನನ್ನ ತಲೆ ಮೇಲೆ 25ರಿಂದ 30 ಕಿಲೋ ತೂಕದ ನನ್ನ ಅಂಗಡಿಯ ಸಾಮಾಗ್ರಿಯನ್ನು ತಲೆ ಮೇಲೆ ಇಟ್ಟು ಸುಮಾರು 1 ಗಂಟೆಯ ಕಾಲ ಕುಳ್ಳಿರಿಸಿದ್ದಾರೆ, ಬಳಿಕ ನನಗೆ ಬೂಟು ಕಾಲಿನಿಂದ ಒದೆದಿದ್ದಾರೆ ಇದರಿಂದ ನಾನು ಅಸ್ವಸ್ಥಗೊಂಡಿದ್ದೇನೆ ನನಗೆ ನ್ಯಾಯ ಬೇಕು ಎಂದು ಆಸ್ಪತ್ರೆಗೆ ದಾಖಲಾಗಿರುವ ಯುವಕ ಹೇಳಿಕೆ ನೀಡಿದ್ದಾರೆ.
ಪೋಲಿಸ್ ಸಿಬ್ಬಂದಿಯ ವಿರುದ್ದ ಕ್ರಮ ಕೈಗೊಳ್ಳಲು ಹಿಂ.ಜಾ.ವೇ ಆಗ್ರಹ
ಯುವಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಹಿಂದೂ ಜಾಗರಣೆ ವೇದಿಕೆಯ ಕಾರ್ಯಕರ್ತರು ಯುವಕನ್ನು ವಿಚಾರಿಸಿದ್ದಾರೆ. ಬಳಿಕ ಯುವಕನಿಂದಲೇ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಿಗೆ, ರಾಜ್ಯ ಗೃಹ ಸಚಿವರಿಗೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ, ಡಿವೈಎಸ್ಪಿಯವರಿಗೆ, ವೃತ್ತ ನಿರೀಕ್ಷಕರಿಗೆ ದೂರು ನೀಡಿದ್ದಾರೆ.
ಸುಬ್ರಹ್ಮಣ್ಯ ಎಸ್.ಐ, ನಿರಾಕರಣೆ: ಯುವಕನಿಗೆ ಪೋಲಿಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಬಗ್ಗೆ ಸುಬ್ರಹ್ಮಣ್ಯ ಎಸ್.ಐ. ಮಂಜುನಾಥ ಅವರು ಪ್ರತಿಕ್ರಿಯೆ ನೀಡಿ, ಪೋಲಿಸ್ ಸಿಬ್ಬಂದಿಯಿಂದ ಯಾವುದೇ ಹಲ್ಲೆ ನಡೆದಿಲ್ಲ, ಹೆಚ್ಚಿನ ಮಾಹಿತಿ ಬೇಕಾದರೆ ಮುಖತಃ ಬಂದು ಮಾತನಾಡಿದರೆ ಹೇಳಬಹುದು ಎಂದು ಹೇಳಿದ್ದಾರೆ.