DAKSHINA KANNADA
ಪಾವೂರು ಉಳಿಯ ದ್ವೀಪದಲ್ಲಿ ಅಕ್ರಮ ಮರಳುಗಾರಿಕೆಗೆ ಶಾಶ್ವತ ಅಂಕುಶ ಹಾಕಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಮಂಗಳೂರು : ಉಳ್ಳಾಲ ಪಾವೂರು ಉಳಿಯ ದ್ವೀಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಶಾಶ್ವತ ಅಂಕುಶ ಹಾಕಲು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಅರ್ಪಿಸಲಾಯಿತು.
ಪಾವೂರು ಉಳಿಯ ದ್ವೀಪವಾಸಿಗಳ ಬದುಕನ್ನು ರಕ್ಷಿಸಬೇಕು ಹಾಗೂ ವಾಸ್ತವ ಚಿತ್ರಣವನ್ನು ಮರೆಮಾಚಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ವ್ಯಕ್ತಿಗಳ ಜೊತೆಗೆ ಕೈಜೋಡಿಸಿ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆ ಹಾಗೂ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಇವುಗಳ ಜಂಟಿ ಆಶ್ರಯದಲ್ಲಿ ಇಂದು(05-07-2024) ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.
ಉಳ್ಳಾಲ ತಾಲೂಕು, ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಪಾವೂರು ಉಳಿಯ ದ್ವೀಪ(ಕುದ್ರು) ದಲ್ಲಿ ಯಾವುದೇ ತರಹದ ಮರಳುಗಾರಿಕೆಗೆ ಅನುಮತಿ ಇಲ್ಲದಿದ್ದರೂ ಬಲಾಢ್ಯ ಮರಳು ಮಾಫಿಯಾ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಸುತ್ತಿರುವುದರಿಂದ ಇಡೀ ಉಳಿಯ ದ್ವೀಪ ಕೊಚ್ಚಿಹೋಗುವ ಭೀತಿಗೆ ಗುರಿಯಾಗಿದೆ.ಸುಮಾರು 55 ಕುಟುಂಬಗಳು ಹಲವು ತಲೆಮಾರುಗಳಿಂದ ವಾಸ ಇರುವ, ಕಾಂಡ್ಲಾ ಜಾತಿಯ ಸಸ್ಯವರ್ಗಗಳಿರುವ ಪರಿಸರದ ದೃಷ್ಟಿಯಿಂದ ಅತಿ ಸೂಕ್ಷ್ಮ ವಾಗಿರುವ ಉಳಿಯ ದ್ಚೀಪವನ್ನು ರಕ್ಷಿಸಲು ತಕ್ಷಣದಿಂದಲೇ ಅಕ್ರಮ ಮರಳುಗಾರಿಕೆಗೆ ಪೂರ್ಣ ರೀತಿಯ ಕಡಿವಾಣ ಹಾಕಬೇಕಾಗಿದೆ.
2014 ರಲ್ಲಿ ಆಗಿನ ದ.ಕ. ಜಿಲ್ಲಾಧಿಕಾರಿ A B ಇಬ್ರಾಹಿಂರವರು ಅಕ್ರಮ ಮರಳುಗಾರಿಕೆ ಕುರಿತಾದ ಸತತ ದೂರಿನ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಆಗಿರುವ ಅನಾಹುತಗಳನ್ನು ಕಂಡು ದ್ವೀಪದ ಸುತ್ತಲ ಒಂದು ಕೀ ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮರಳುಗಾರಿಕೆ ನಿಷೇಧಿಸಿ 28.11.2014 ರಂದು ಆದೇಶ ಹೊರಡಿಸಿರುತ್ತಾರೆ.ಆದರೂ ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ.ಈ ದಂಧೆಗೆ ಸ್ಥಳೀಯ ಪೊಲೀಸ್ ಠಾಣೆಯ ಶ್ರೀ ರಕ್ಷೆಯೂ ಇರುತ್ತದೆ. ದೂರು ನೀಡಿದಲ್ಲಿ ದೂರು ನೀಡಿದವರ ಪೂರ್ತಿ ವಿವರಗಳನ್ನು ಪೊಲೀಸರೇ ದಂಧೆಕೋರರಿಗೆ ತಲುಪಿಸುತ್ತಾರೆ.
ಈ ಬಗ್ಗೆ ವಾಸ್ತವ ಚಿತ್ರಣವನ್ನು ಅರಿಯಲು ಎರಡು ಸಂಘಟನೆಗಳ ಪ್ರಮುಖರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವೊಂದು ಜಿಲ್ಲೆಯ ಪ್ರಮುಖ ಮಾಧ್ಯಮ ಮಿತ್ರರ ಜೊತೆಗೂಡಿ ಸ್ಥಳೀಯ ಪ್ರದೇಶಕ್ಕೆ ಭೇಟಿ ನೀಡಿತು.ಬಳಿಕ ದಕ.ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಗ್ರ ಮಾಹಿತಿಯನ್ನು ಒದಗಿಸಿತು. ಅದೇ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವ ನೆಪದಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ ವ್ಯಕ್ತಿಗಳ ದೋಣಿಯಲ್ಲೇ ಹೋಗಿ ಮಾಹಿತಿಗಳನ್ನು ಕಲೆ ಹಾಕಿತು. ಅಲ್ಲಿ ಅಕ್ರಮ ಮರಳುಗಾರಿಕೆ ನಡೆದೇ ಇಲ್ಲ,ದ್ವೀಪದ ಭೂಪ್ರದೇಶದ ಕಬಳಿಕೆ ನಡೆದೇ ಇಲ್ಲ, ಈ ಬಗ್ಗೆ ಮಾಧ್ಯಮಗಳು ಪ್ರಸಾರ ಪಡಿಸಿರುವ ಕೆಲವು ದ್ರಶ್ಯಗಳ ವಿಡಿಯೋವನ್ನು ಅತ್ಯಂತ ಹಳೆಯ ವಿಡಿಯೋ ಎಂದು ಸ್ವತಃ ಅಧಿಕಾರಿಗಳೇ ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಆದ್ದರಿಂದ ಇಂತಹ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಿ ಅತ್ಯಂತ ಕಠಿಣ ಕ್ರಮಗಳನ್ನು ಜರುಗಿಸಬೇಕೆಂದು ಸರಕಾರವನ್ನು ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಮಾನ ಮನಸ್ಕ ಸಂಘಟನೆ ಗಳ ಜಂಟಿ ವೇದಿಕೆಯ ಪ್ರಮುಖರಾದ ಮುನೀರ್ ಕಾಟಿಪಳ್ಳ,ರೋಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್,ಕೆಥೋಲಿಕ್ ಸಭಾದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಇತರ ಪ್ರಮುಖರಾದ ಸ್ಟಾನಿ ಲೋಬೋ,ಜೋನ್ ಲಸ್ರದೋ ಹಾಗೂ ಪಾವೂರು ಉಳಿಯ ದ್ವೀಪವಾಸಿಗಳಾದ ಗಿಲ್ಬರ್ಟ್ ಡಿಸೋಜ,ರೊನಾಲ್ಡ್ ಡಿಸೋಜ,ಬೆನೆಡಿಕ್ಟ್ ಡಿಸೋಜ, ಬಜಿಲ್ ಡಿಸೋಜ, ಫಿಲಿಫ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.