Connect with us

  LATEST NEWS

  ಬಲ್ಮಠ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿತ ಪ್ರಕರಣ – ನಾಲ್ವರ ಮೇಲೆ ಎಫ್ಐಆರ್ – ಕಟ್ಟಡ ಪರವಾನಗಿ ಅಮಾನತು

  ಮಂಗಳೂರು ಜುಲೈ 05: ಬಲ್ಮಠದಲ್ಲಿ ಉದ್ಯಮಿ ರೋಹನ್ ಮೊಂತೆರೊ ಅವರ ಮಾಲಕತ್ವದಲ್ಲಿ ನಿರ್ಮಾಣವಾಗುತ್ತಿದ್ದ ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆ್ಯಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತದಿಂದ ಕಾರ್ಮಿಕ ಸಾವನಪ್ಪಿದ್ದು. ಈ ದುರ್ಘಟನೆ ಸಂಬಂಧ ಕಾಮಗಾರಿಯ ಗುತ್ತಿಗೆದಾರ ಹಾಗೂ ಮೂವರು ಮೇಲ್ವಿಚಾರಕರು ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ನಗರ ಪೂರ್ವ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.


  ಬಲ್ಮಠದಲ್ಲಿ ನಿರ್ಮಾಣವಾಗುತ್ತಿರುವ ರೋಹನ್ ಸ್ಯೂಟ್ಸ್ ಕಮರ್ಷಿಯಲ್ ಆ್ಯಂಡ್ ಫುಲ್ಲಿ ಫರ್ನಿಷ್ಡ್ ಸ್ಟುಡಿಯೊ’ ಕಟ್ಟಡ ಸಂಕೀರ್ಣದ ತಳಪಾಯದ ತಡೆಗೋಡೆಯಲ್ಲಿ ನೀರು ಸೋರಿಕೆ ತಡೆಯುವ (ವಾಟರ್‌ಪ್ರೂಫಿಂಗ್‌) ಕೆಲಸ ನಿರ್ವಹಿಸುತ್ತಿದ್ದಾಗ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿತ್ತು, ಮಣ್ಣು ಕುಸಿತದಿಂದ ಉತ್ತರ ಪ್ರದೇಶದ ಆಜಂಗಡ ಜಿಲ್ಲೆಯ ಪರಾಸಿ ಗ್ರಾಮದ ಚಂದನ್ ಕುಮಾರ್ (30) ಬುಧವಾರ ಮೃತಪಟ್ಟಿದ್ದರು. ಇನ್ನೊಬ್ಬ ಕಾರ್ಮಿಕ ಬಿಹಾರದ ರೋಹ್ಟಾಸ್‌ ಜಿಲ್ಲೆಯ ಅಕ್ಹೊರಾ ಗ್ರಾಮದ ಧವನಿಯಾದ ರಾಜ್ ಕುಮಾರ್ (18) ಅವರನ್ನು ರಕ್ಷಣೆ ಮಾಡಲಾಗಿತ್ತು.

  ಮಣ್ಣು ಕುಸಿತದಿಂದ ಮೃತಪಟ್ಟ ಚಂದನ್‌ ಕುಮಾರ್ ಪತ್ನಿ ಕಿರಣ ದೇವಿ ಅವರಿಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ₹ 2 ಲಕ್ಷ ಪರಿಹಾರ ವಿತರಿಸಿದೆ. ಅಲ್ಲದೇ ಕಟ್ಟಡ ಕಾಮಗಾರಿಯ ಗುತ್ತಿಗೆದಾರರು ₹ 2 ಲಕ್ಷ ಪರಿಹಾರ ವಿತರಿಸಿದ್ದಾರೆ ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.


  ದುರ್ಘಟನೆ ನಡೆದ ಸ್ಥಳದಲ್ಲಿ 5282.79 ಚ.ಮೀ ವಿಸ್ತೀರ್ಣದ ಕಟ್ಟಡ ನಿರ್ಮಿಸಲು ರೋಹನ್ ಮೊಂತೆರೊ ಅವರು ಪಾಲಿಕೆಯಿಂದ 2024ರ ಮೇ 30ರಂದು ಪರವಾನಗಿ ಪಡೆದಿದ್ದರು. ಮಳೆಗಾಲದಲ್ಲಿ ನೆಲಮಟ್ಟದಿಂದ ಆಳಕ್ಕೆ ಅಗೆದು ಯಾವುದೇ ಕಾಮಗಾರಿ ನಡೆಸಬಾರದು ಎಂದು ಪಾಲಿಕೆ ಸೂಚನೆ ನೀಡಿದ್ದರೂ ಇಲ್ಲಿ ಕಾಮಗಾರಿ ನಡೆಸಲಾಗಿದೆ. ಈ ಕಾಮಗಾರಿಯಿಂದಾಗಿಯೇ ಮಣ್ಣು ಕುಸಿತ ಉಂಟಾಗಿದೆ. ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದು, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ. ಹಾಗಾಗಿ ಈ ಕಟ್ಟಡ ನಿರ್ಮಾಣಕ್ಕೆ ನೀಡಲಾದ ಪರವಾನಗಿಯನ್ನು ಮುಂದಿನ ಆದೇಶದವರೆಗೆ ಅಮಾನತು ಮಾಡಲಾಗಿದೆ’ ಎಂದು ಪಾಲಿಕೆ ಆಯುಕ್ತರು ಆದೇಶ ಮಾಡಿದ್ದಾರೆ. ‘ಈ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಬಾರದು. ಕಾಮಗಾರಿಯ ಸ್ಥಳದಲ್ಲಿ ಬಂದೋಬಸ್ತ್‌ ಕೈಗೊಳ್ಳಬೇಕು. ಸ್ಥಳಕ್ಕೆ ಯಾರೂ ಪ್ರವೇಶಿಸದಂತೆ ನೊಡಿಕೊಳ್ಳಬೇಕು’ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply