DAKSHINA KANNADA
ಅ. 23ರಂದು ಮಂಗಳೂರಿನಲ್ಲಿ ಪಿಲಿನಲಿಕೆ- ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಗೌರವ ಅತಿಥಿ
ಮಂಗಳೂರು, ಅಕ್ಟೋಬರ್ 20: ಪಿಲಿನಲಿಕೆ ಪ್ರತಿಷ್ಠಾನ(ರಿ.) ಹಾಗೂ ನಮ್ಮ ಟಿ.ವಿ.ಯ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಆಯ್ದ 10 ಪ್ರಸಿದ್ಧ ಹುಲಿವೇಷ ತಂಡಗಳ ಮಧ್ಯೆ “ಪಿಲಿ ನಲಿಕೆ-2023″ 8ನೇ ಆವೃತ್ತಿ ಸ್ಪರ್ಧೆಯು ಅ. 23ರಂದು ಸೋಮವಾರ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವುದು” ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ತುಳುನಾಡಿನ ಅಪ್ರತಿಮ ಕಲಾ ಪರಂಪರೆಯಲ್ಲೊಂದಾದ ಹುಲಿವೇಷ ಇಂದು ಕುಣಿತ, ಬಣ್ಣಗಾರಿಕೆ, ನರ್ತನ, ಹಿನ್ನಲೆ ಸಂಗೀತ ಹೀಗೆ ಎಲ್ಲಾ ವಿಭಾಗದಲ್ಲೂ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮೂಲ
ಸೊಗಡಿನೊಂದಿಗೆ ಉಳಿಸಿ, ಪೋಷಿಸುವ ನಿಟ್ಟಿನಲ್ಲಿ ಪ್ರತೀ ವರ್ಷವೂ ಮಂಗಳೂರು ದಸರಾದ ಸಂಧರ್ಭದಲ್ಲಿ ಪಿಲಿ ನಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿ ಮಂಗಳೂರಿನ ಉರ್ವ ಕ್ರಿಕೆಟ್ ಮೈದಾನದಲ್ಲಿ 8ನೇ ಆವೃತ್ತಿ ನಡೆಯಲಿರುವುದು” ಎಂದರು.
“ಪ್ರತಿಷ್ಠಿತ 10 ತಂಡಗಳು ಭಾಗವಹಿಸಲಿರುವ ಪಿಲಿನಲಿಕೆ ಸ್ಪರ್ಧೆಯನ್ನು ಬೆಳಿಗ್ಗೆ 11 ಘಂಟೆಗೆ ಶ್ರೀಮದ್ ಆನೆಗುಂದಿ ಜಗದ್ಗುರು ಮಹಾ ಸಂಸ್ಥಾನ ಮಹಾ ಸರಸ್ವತಿ ಪೀಠ, ಕಟಪಾಡಿಯ ಪರಮಪೂಜ್ಯ, ಜಗದ್ಗುರು, ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಉದ್ಘಾಟಿಸಲಿರುವರು. ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಹಾಗೂ ಹಾಗೂ ಮಂಗಳೂರಿನ ಪೊಲೀಸ್ ಅಧೀಕ್ಷಕ ಅನುಪಮ್ ಅಗರ್‌ವಾಲ್ ಉಪಸ್ಥಿತರಿರಲಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ರೂ.5 ಲಕ್ಷ ಹಾಗೂ ಟ್ರೋಫಿ, ದ್ವಿತೀಯ ರೂ. 3 ಲಕ್ಷ ಹಾಗೂ ಟ್ರೋಫಿ, ತೃತೀಯ ರೂ. 2 ಲಕ್ಷ ಟ್ರೋಫಿ ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಬಣ್ಣಗಾರಿಕೆ, ಕರಿ ಹುಲಿ, ಮರಿ ಹುಲಿ, ತಾಸೆ, ಮುಡಿ ಹಾರಿಸುವುದು, ನರ್ತನ ವಿಜೇತರಿಗೆ ತಲಾ ರೂ. 50 ಸಾವಿರ ನಗದು ಪುರಸ್ಕಾರ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ತಲಾ 50 ಸಾವಿರ ರೂಪಾಯಿ ಪ್ರೋತ್ಸಾಹಕಧನ ನೀಡಲಾಗುವುದು.
ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪರ್ಧಾ ಕಾರ್ಯಕ್ರಮವೊಂದಕ್ಕೆ ಜರ್ಮನ್ ಸ್ಟ್ರಕ್ಟರ್ ಅಳವಡಿಸಲಾಗುತ್ತಿದ್ದು, 10 ಸಾವಿರ ಜನರು ಕುಳಿತು ನೋಡುವ ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಮಾಡಲಾಗುವುದು.
ಹಿಂದಿ, ಕನ್ನಡ, ತುಳು ಚಿತ್ರ ರಂಗದ ತಾರೆಯರು, ವಿಶೇಷವಾಗಿ ಸುನೀಲ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಶೆಟ್ಟಿ, ಹಾಗೂ ಕ್ರಿಕೆಟ್ ಲೋಕದ ಸಾಧಕರಾದ ಹರ್ಭಜನ್ ಸಿಂಗ್, ಜಾಂಟಿ ರೋಡ್ಸ್, ಪಿಲಿನಲಿಕೆಗೆ ತಾರಾ ಮೆರುಗು ನೀಡಲಿದ್ದಾರೆ.
ರಾಜಕೀಯ ನಾಯಕರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರು” ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಡಾ.ಶಿವಶರಣ್ ಶೆಟ್ಟಿ, ಅವಿನಾಶ್, ವಿಕಾಸ್, ನವೀನ್ ಶೆಟ್ಟಿ ಎಡ್ಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.
You must be logged in to post a comment Login