LATEST NEWS
ಬ್ಲೂ ಫಿಲ್ಮ್ ದಂಧೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗೆ ಜುಲೈ 23 ರವರೆಗೆ ಪೊಲೀಸ್ ಕಸ್ಟಡಿ

ಮುಂಬೈ ಜುಲೈ 20: ಬ್ಲೂಫಿಲ್ಮ್ ಗಳನ್ನು ನಿರ್ಮಾಣ ಮಾಡಿ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಅವುಗಳನ್ನು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರ ಜುಲೈ 23ರವರೆಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದರು. ಪೊಲೀಸರು ಮತ್ತೊಬ್ಬ ಆರೋಪಿ ರಿಯಾನ್ ಜಾನ್‌ನನ್ನು ಬಂಧಿಸಿದ್ದು ಆತನನ್ನು ಜುಲೈ 23ರವರೆಗೂ ನ್ಯಾಯಾಲಯ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಕುಂದ್ರಾ ಹಾಗೂ ರಿಯಾನ್‌ನನ್ನು ಮುಂಬೈ ಪೊಲೀಸರು ಇಲ್ಲಿನ ಎಸ್ಟ್ಲನೇಡ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

45 ವರ್ಷದ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಲನಚಿತ್ರಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದು, ಅವರ ಹೆಚ್ಚಿನ ವಿಚಾರಣೆಗಾಗಿ ಗರಿಷ್ಠ ಅವಧಿಗೆ ತಮ್ಮ ಕಸ್ಟಡಿಗೆ ನೀಡಬೇಕೆಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು ತಿಳಿಸಿದರು.
ಕುಂದ್ರಾ ಅವರ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು ಅದರ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ ಮತ್ತು ಅವರ ವ್ಯವಹಾರ ಮತ್ತು ವಹಿವಾಟುಗಳನ್ನು ಸಹ ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.