LATEST NEWS
ಮಹಿಳೆಯನ್ನು ಚುಡಾಯಿಸಿದ ವ್ಯಕ್ತಿಗೆ ಸಾರ್ವಜನಿಕರಿಂದ ಥಳಿತ; ಬಿದ್ದ ಏಟಿಗೆ ಸ್ಥಳದಲ್ಲೆ ಸಾವು
ಕಾಸರಗೋಡು, ಜನವರಿ 24: ಮಹಿಳೆಯನ್ನು ಚುಡಾಯಿಸಿದ್ದಾನೆ ಎಂಬ ಆರೋಪದಲ್ಲಿ 48 ವರ್ಷದ ವ್ಯಕ್ತಿಯೋರ್ವನನ್ನು ಜನರು ಅಟ್ಟಾಡಿಸಿಕೊಂಡು ಹೋಗಿದ್ದು, ಆತ ಸಾವನ್ನಪ್ಪಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ.
ಸಾರ್ವಜನಿಕರಿಂದ ಥಳಿತಕೊಳಗಾಗಿ ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವುದರೊಳಗೆ ಆತ ಕೊನೆಯುಸಿರೆಳೆದಿದ್ದಾನೆ. ಚೆಮನಾಡ್ ಮೂಲದ ಮೊಹಮ್ಮದ್ ರಫೀಕ್ ಎಂಬಾತನೇ ಮೃತಪಟ್ಟ ವ್ಯಕ್ತಿ. ಕಾಸರಗೋಡಿನ ಕಿಮ್ಸ್ ಆಸ್ಪತ್ರೆ ಬಳಿ ನಿಂತಿದ್ದ ಮಹಿಳೆಯನ್ನು ಮೊಹಮ್ಮದ್ ಕೆಣಕಿದ್ದಾನೆ. ಮಹಿಳೆಯ ಹಿಂದೆ ನಿಂತು ಆಕೆಯನ್ನು ಚುಡಾಯಿಸಿದ ಮೊಹಮ್ಮದ್ನ ಜೊತೆ ಆ ಮಹಿಳೆ ಜಗಳವಾಡಿದ್ದಾಳೆ.
ಜನರು ಸೇರಿಬಿಡಬಹುದು ಎಂಬ ಭಯದಿಂದ ಆತ ಅಲ್ಲಿಂದ ಓಡಿಹೋಗಿದ್ದಾನೆ. ಆದರೆ, ಆತನ ಹಿಂದೆಯೇ ಮಹಿಳೆ ಕೂಡ ಓಡಿದ್ದಾಳೆ. ಇದನ್ನು ನೋಡಿದ ಆಟೋರಿಕ್ಷಾ ಡ್ರೈವರ್ಗಳು ಹಾಗೂ ಸ್ಥಳೀಯರು ಕೂಡ ಆತನ ಬೆನ್ನತ್ತಿದ್ದಾರೆ. ಬಸ್ ಸ್ಟಾಂಡ್ನತ್ತ ಓಡಿದ ಮೊಹಮ್ಮದ್ ರಫೀಕ್ ಹಿಂದೆ ಜನರು ಓಡಿದ್ದಾರೆ. ಇಬ್ಬರು ಮೊಹಮ್ಮದ್ ರಫೀಕ್ನನ್ನು ಹಿಡಿದುಕೊಂಡು ಹೊಡೆದಿದ್ದಾರೆ.
ಜನರ ಕೈಯಲ್ಲಿ ಸಿಕ್ಕಿಹಾಕಿಕೊಂಡ ಮೊಹಮ್ಮದ್ ರಫೀಕ್ ಬೆವರಲಾರಂಭಿಸಿದ್ದು, ಕೆಳಗೆ ಕುಸಿದುಬಿದ್ದಿದ್ದಾನೆ. ಆತನ ತಮ್ಮಿಂದ ತಪ್ಪಿಸಿಕೊಳ್ಳಲು ನಾಟಕವಾಡುತ್ತಿದ್ದಾನೆ ಎಂದು ಭಾವಿಸಿದ ಜನರು ಆತನನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೂ ಏಳದಿದ್ದಾಗ ಅನುಮಾನಗೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಆದರೆ, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಆತನಿಗೆ ತೀವ್ರ ಹೃದಯಾಘಾತ ಉಂಟಾಗಿ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಕಣ್ಣೂರು ಸರ್ಕಾರಿ ಮೆಡಿಕಲ್ ಕಾಲೇಜಿಗೆ ಮೊಹಮ್ಮದ್ ರಫೀಕ್ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.