DAKSHINA KANNADA
ಎರ್ರಾಬಿರ್ರಿಯಾಗಿ ವಾಹನ ಚಲಾಯಿಸಿರುವುದನ್ನು ಪ್ರಶ್ನಿಸಿದ ದಂಪತಿಗೆ ಮಾರಣಾಂತಿಕ ಹಲ್ಲೆ

ಉಳ್ಳಾಲ, ಜನವರಿ 01: ಎರ್ರಾಬಿರ್ರಿಯಾಗಿ ವಾಹನ ಚಲಾಯಿಸಿರುವುದನ್ನು ಪ್ರಶ್ನಿಸಿದ ದಂಪತಿಗೆ ನೆರೆಮನೆಯ ನಾಲ್ವರು ಸೇರಿ ಕಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲದ ಹೊಯ್ಗೆ ಎಂಬಲ್ಲಿ ನಡೆದಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಹೊಯ್ಗೆ ನಿವಾಸಿ ಸ್ಟೀವನ್ ಡಿಸೋಜ(೪೦) ಹಾಗೂ ಪತ್ನಿ ವೀಣಾ ಡಿಸೋಜ (೩೦) ಹಲ್ಲೆಗೊಳಗಾದವರು. ನೆರೆಮನಯೆ ಪ್ರಕಾಶ್ ಡಿಸೋಜ, ಮಧುಜೀವನ್ ಡಿಸೋಜ ಆತನ ಪತ್ನಿ ಕೀರ್ತಿ ಡಿಸೋಜ ಹಾಗೂ ಚೇತನ್ ಡಿಸೋಜ ಹಲ್ಲೆ ನಡೆಸಿದವರು. ತೊಕ್ಕೊಟ್ಟು ಚಚ್‌೯ನಿಂದ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿ ನಡೆದುಕೊಂಡು ಬರುವ ಸಂದರ್ಭ ನೆರೆಮನೆಯ ತಂಡ ಕಾರನ್ನು ಎರ್ರಾಬಿರ್ರಿಯಾಗಿ ಚಲಾಯಿಸಿತ್ತು.
ರಸ್ತೆಯೂ ದುರಸ್ತಿಯಲ್ಲಿರದ ಕಾರಣ ದಂಪತಿ ಅಪಘಾತದಿಂದ ಸ್ವಲ್ಪದರಲ್ಲೇ ತಪ್ಪಿದ್ದಾರೆ. ಇದನ್ನು ಸ್ಟೀವನ್ ಅವರು ನೆರೆಮನೆಗೆ ತೆರಳಿ ಪ್ರಶ್ನಿಸಿದ್ದರು. ಇದರಿಂದ ಕುಪಿತಗೊಂಡ ನೆರೆಮನೆಯ ತಂಡ ಅಕ್ರಮವಾಗಿ ಸ್ಟೀವನ್ ಅವರ ಮನೆಯೊಳಗೆ ಪ್ರವೇಶಿಸಿ ದಂಪತಿಗೆ ಕಟ್ಟಿಗೆಯಿಂದ ತಲೆ, ಕಾಲು, ಬೆನ್ನು, ಸೊಂಟದ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಇಬ್ಬರು ಉಳ್ಳಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
