LATEST NEWS
ಟೊಮೆಟೊ ಮಾರಿ, ಒಂದು ತಿಂಗಳಲ್ಲೇ ಮೂರು ಕೋಟಿ ಒಡೆಯನಾದ ರೈತ…!
ಪುಣೆ, ಜುಲೈ 20: ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದ್ದರೆ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮೆಟೊ ಮಾರಿ ತಿಂಗಳೊಪ್ಪತ್ತಿನಲ್ಲೇ ₹ 3 ಕೋಟಿ ಆದಾಯ ಗಳಿಸಿದ್ದಾರೆ.
ಪುಣೆ ಜಿಲ್ಲೆಯ ಜುನ್ನಾರ್ ತಾಲ್ಲೂಕಿನ ಪಾಚ್‌ಘರ್ ಗ್ರಾಮದ ಈಶ್ವರ್ ಗಾಯ್ಕರ್ ಭರ್ಜರಿ ಆದಾಯ ಗಳಿಸಿದ ರೈತ.ಇದೇ ವರ್ಷ ಮೇ ತಿಂಗಳಲ್ಲಿ ಟೊಮೆಟೊ ಬೆಳೆದಿದ್ದ ಈಶ್ವರ್, ಬೆಲೆ ಕುಸಿತದಿಂದಾಗಿ ಬೆಳೆಯನ್ನು ರಸ್ತೆಗೆ ಎಸೆಯಬೇಕಾದ ಕಠಿಣ ಸವಾಲನ್ನು ಎದುರಿಸಬೇಕಾಯಿತು. ಆದರೂ ವಿಚಲಿತರಾಗದೇ ಈಗಾಗಲೇ ತಮ್ಮ 12 ಎಕರೆಯಲ್ಲಿ ಬೆಳೆಯುತ್ತಿದ್ದ ಟೊಮೆಟೊ ಬೆಳೆಯನ್ನು ಉಳಿಸಿಕೊಳ್ಳುವ ಅಚಲ ನಿರ್ಧಾರವನ್ನು ಕೈಗೊಂಡರು. ಇದಕ್ಕಾಗಿ ಹಗಲೂ ರಾತ್ರಿ ದಣಿವರಿಯದೇ ದುಡಿದರು.
ಜೂನ್ 11ರಿಂದ ಜುಲೈ 18ರ ನಡುವೆ ಜುನ್ನಾರ್ ತಾಲ್ಲೂಕಿನ ನಾರಾಯಣಗಾಂವ್ ಎಪಿಎಂಸಿಯಲ್ಲಿ 18 ಸಾವಿರ ಕ್ರೇಟ್‌ಗಳಷ್ಟು (1 ಕ್ರೇಟ್‌ಗೆ 20 ಕೆಜಿ) ಟೊಮೆಟೊ ಮಾರಿರುವ ಈಶ್ವರ್ ₹ 3 ಕೋಟಿ ಗಳಿಸಿದ್ದಾರೆ. ಉಳಿದಿರುವ ಸುಮಾರು 4 ಸಾವಿರ ಕ್ರೇಟ್‌ಗಳಷ್ಟು ಟೊಮೆಟೊ ಮಾರಿ ₹ 50 ಲಕ್ಷ ಹೆಚ್ಚುವರಿ ಆದಾಯ ಪಡೆಯುವ ನಿರೀಕ್ಷೆ ಅವರದ್ದು.