LATEST NEWS
ಶತಾಯುಷಿ ವಿದ್ವಾಂಸರ ನೇತೃತ್ವದಲ್ಲಿ ಕೊರೊನಾ ಮುಕ್ತಿಗಾಗಿ ನಡೆಯುತ್ತಿದ ಚತುಃ ಸಂಹಿತಾಯಾಗ
ಮಂಗಳೂರು ಜೂನ್ 03: ಕಂಡು ಕೇಳರಿಯದ ವಿಪತ್ತು ನಷ್ಟವನ್ನು ತಂದಿಟ್ಟು ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಮಹಾವ್ಯಾಧಿಯ ಮುಕ್ತಿಗಾಗಿ ಪ್ರಪಂಚಾದ್ಯಂತ ಅಸಂಖ್ಯ ಜನ ಅವರವರ ತಿಳುವಳಿಕೆ ಸಾಮರ್ಥ್ಯಕ್ಕನುಗುಣವಾಗಿ ಹಗಲಿರುಳೆನ್ನದೆ ಭಗೀರಥ ಯತ್ನ ನಡೆಸುತ್ತಿದ್ದಾರೆ .
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆಯವರೂ, ಚತುರ್ವೇದ ಪಾರಂಗತರೂ ಆಗಿರುವ 102 ವರ್ಷ ವಯಸ್ಸಿನ ಅಂಗಡಿಮಾರು ಕೃಷ್ಣ ಭಟ್ಟರು ಮುತುವರ್ಜಿಯಿಂದ ಈ ಚತುಃ ಹಳೆಯಂಗಡಿ ಸಮೀಪದ ಪಕ್ಷಿಕೆರೆ ಎಂಬಲ್ಲಿನ ಸ್ವಗೃಹದಲ್ಲಿಯೇ ಆರಂಭಿಸಿದ್ದಾರೆ.
ತಮ್ಮ ಜೀವಮಾನದಲ್ಲಿ ಕೊರೊನಾದಂಥಹ ಮಹಾವ್ಯಾಧಿ ಜಗತ್ತನ್ನು ಕಂಡು ಕೇಳರಿಯದ ರೀತಿಯಲ್ಲಿ ಬಾಧಿಸುತ್ತಿರುವುದನ್ನು ಕಂಡು ಮರುಗಿದ ಈ ಹಿರಿಜೀವ ತನ್ನ ಅರಿವಿನ ನೆಲೆಯಲ್ಲಿ ಋಕ್ ಯಜು ಸಾಮ ಹಾಗೂ ಅಥರ್ವವೇದಗಳೆಂಬ ನಾಲ್ಕೂ ವೇದಗಳ ಯಾಗವನ್ನು ಸಂಕಲ್ಪಿಸಿ ತಾನೇ ಸ್ವತಃ ಯಾಜ್ಞಿಕರಾಗಿ ಯಾಗ ನೆರೆವೇರಿಸುತ್ತಾ ಲೋಕಕ್ಷೇಮಕ್ಕಾಗಿ ವೇದಪುರುಷನಲ್ಲಿ ( ಭಗವಂತನಲ್ಲಿ) ಪ್ರಾರ್ಥಿಸುತ್ತಿದ್ದಾರೆ .
ಕಳೆದ ಅನೇಕ ದಿನಗಳಿಂದ ತನ್ನ ಸ್ವಗೃಹದಲ್ಲೇ ವಿದ್ವಾಂಸರೂ ಆಗಿರುವ ಪುತ್ರರು ಹಾಗೂ ಇತರೆ ಕೆಲವು ವಿದ್ವಾಂಸರ ಸಹಕಾರದೊಂದಿಗೆ ಈ ಚತುಃ ಸಂಹಿತಾಯಾಗ ಪ್ರಾರಂಭಿಸಿದ ಭಟ್ಟರು ಈಗಾಗಲೇ ಋಕ್ ಮತ್ತು ಯಜುಃಸಂಹಿತಾ ಯಾಗಗಳನ್ನು ಸಂಪನ್ನಗೊಳಿಸಿದ್ದಾರೆ .
ಇದೀಗ ವೈಶಾಖ ಬಹುಳ ಪಂಚಮಿಯಂದು ಭಾನುವಾರದಂದು ಸಾಮಸಂಹಿತಾಯಾಗವನ್ನು ಪ್ರಾರಂಭಿಸಲಾಗಿದ್ದು ಐದು ದಿನಗಳ ಕಾಲ ನಡೆಯಲಿದೆ . 1198 ಅಪೂರ್ವ ಮಂತ್ರಗಳನ್ನು ಒಳಗೊಂಡಿರುವ ಸಾಮವೇದವನ್ನು ಗಾನರೂಪದಲ್ಲಿ ಪಠಿಸುವುದರಿಂದ ದಿನಕ್ಕೆ ಸುಮಾರು ಇನ್ನೂರರಷ್ಟು ಮಂತ್ರಗಳ ಆಹುತಿಯನ್ನು ಯಜ್ಞಮುಖೇನ ಅರ್ಪಿಸಲಾಗುತ್ತಿದೆ .
ಲಾಕ್ ಡೌನ್ ಇರುವ ಕಾರಣ ಯಾವ ಆಡಂಬರವೂ ಇಲ್ಲದೇ ಕೊರೊನಾ ನಿರ್ಬಂಧಗಳನ್ನು ಪಾಲಿಸಿಕೊಂಡು ಕೇವಲ ಬೆರಳೆಣಿಕೆಯ ವಿದ್ವಾಂಸರನ್ನು ಮಾತ್ರ ಸೇರಿಸಿಕೊಂಡು ಅನುಷ್ಠಾನಕ್ಕೆ ಹೆಚ್ಚು ಒತ್ತುಕೊಡು ಈ ಕರ್ತವ್ಯವನ್ನು ನೆರವೇರಿಸಲಾಗುತ್ತಿದೆ .
ಈ ಯಾಗ ಮುಗಿದ ಬಳಿಕ ಅಥರ್ವಸಂಹಿತಾಯಾಗವನ್ನೂ ನಡೆಸಿ ಭಗವದರ್ಪಣಗೊಳಿಸಿ ಲೋಕಕ್ಷೇಮ ಕರುಣಿಸುವಂತೆ ಪ್ರಾರ್ಥಿಸಲಾಗುವುದು ಎಂದು ಭಟ್ಟರ ಸುಪುತ್ರ ವಿದ್ವಾನ್ ವಿಶ್ವೇಶ ಭಟ್ ತಿಳಿಸಿದ್ದಾರೆ .