DAKSHINA KANNADA
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಹೊರಟ ಸರಕು ನೌಕೆ ಮುಳುಗಡೆ, 3 ದಿನ ಅನ್ನನೀರಿಲ್ಲದೇ ಪವಾಡ ಸದೃಶ್ಯರಾಗಿ ಪಾರಾದ 8 ಜನ ಸಿಬಂದಿ..!
ಮಂಗಳೂರು : ಮಂಗಳೂರು ಹಳೇ ಬಂದರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಗಿಸುತ್ತಿದ್ದ ನೌಕೆಯೊಂದು ಲಕ್ಷದ್ವೀಪ ಕರಾವಳಿಯಲ್ಲಿ ಮುಳುಗಿದ ಘಟನೆ ನಡೆದಿದೆ. ಅದರಲ್ಲಿದ್ದ 8 ಜನ ಸಿಬಂದಿ ಸಮುದ್ರದಲ್ಲೇ ಮೂರು ದಿನ ಅನ್ನ ಆಹಾರ, ನೀರಿಲ್ಲದೇ ಪವಾಡ ಸದೃಶ್ಯರಾಗಿ ಬದುಕಿ ಮರು ಜನ್ಮ ಪಡೆದಿದ್ದಾರೆ.
ಮಾರ್ಚ್ 12 ತಮಿಳುನಾಡು ಮೂಲದ MSV ವರದರಾಜು ಎಂಬ ಸರಕು ಸಾಗಣೆಯ ನೌಕೆ ಮಂಗಳೂರು ಹಳೇ ಬಂದರಿಂದ ಸರಕು ತುಂಬಿಸಿ ಲಕ್ಷದ್ವೀಪದತ್ತ ಅಗತಿ ದ್ವೀಪದತ್ತ ಪ್ರಯಾಣ ಬೆಳೆಸಿತ್ತು. ಹಡಗಿನಲ್ಲಿ ಕ್ಯಾಪ್ಟನ್ ಭಾಸ್ಕರನ್, ಸಿಬಂದಿಗಳಾದ ನಾಗಲಿಂಗಂ, ನಲ್ಲಮುತ್ತು, ಮಣಿದೇವನ್ ವೇಲು, ಅಜಿತ್, ವಿಘ್ನೇಶ್ ಕುಮಾರ್, ಕುಪ್ಪುರಾಮನ್, ಮುರುಗನ್ ಸೇರಿ 8 ಜನ ಸಿಬಂದಿಗಳಿದ್ದರು. 13 ರಂದು ಅಂದರೋತ್ ದ್ವೀಪದಲ್ಲಿ ಅರ್ಧದಷ್ಟು ಸರಕು ಖಾಲಿ ಮಾಡಿ ರಾತ್ರೀಯೇ ಅಗತ್ತಿ ದ್ವೀಪದತ್ತ ಪ್ರಯಾಣ ಬೆಳೆಸಿತ್ತು. ಮುಂಜಾನೆ ಸುಮಾರಿಗೆ ದೋಣಿಯ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಮುಳುಗಲಾರಂಭಿದೆ. ಸಿಬಂದಿ ದುರಸ್ತಿ ಮಾಡಲು ಸಾಕಷ್ಟು ಪ್ರಯತ್ನಿದರೂ ವಿಫಲವಾಗಿ ದೋಣಿ ಮುಳುಗಡೆಯಾಗಿದೆ. ಕೊನೆಗೆ ಅದರಲ್ಲಿದ್ದ ಜೀವರಕ್ಷಕ ಸಾಧನಗಳೊಂದಿಗೆ ಪುಟ್ಟ ದೋಣಿಯೊಂದಿಗೆ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಅವರಲ್ಲಿದ್ದ ಸಂಪರ್ಕವೂ ಕಡಿದು ಹೋಗಿತ್ತು. ಕೂಡಲೇ ಅವರು ಮಂಗಳೂರು ಮತ್ತು ಲಕ್ಷದ್ವೀಪದ ಕೋಸ್ಟ್ ಗಾರ್ಡಿಗೆ ಸಹಾಯಕ್ಕೆ ಸಂದೇಶ ಕಳಿಸಿದ್ದರು. ಮಾರ್ಚ್ 15 ರಿಂದ 17 ರ ವರೆಗೆ ಕೋಸ್ಟ್ ಗಾರ್ಡ್ ಅವರನ್ನು ಹುಡುಕು ಪ್ರಯತ್ನ ಮಾಡಿ ವಿಫಲವಾಗಿತ್ತು. ಮಾರ್ಚ್ 18 ರಂದು ಲಕ್ಷದ್ವೀಪದ ಮೀನುಗಾರಿಕಾ ದೋಣಿಯೊಂದಕ್ಕೆ ದೂರದ ಸಮುದ್ರದಲ್ಲಿ ಪುಟ್ಟ ದೋಣಿಯಲ್ಲಿ ಜನ ಸಹಾಯಕ್ಕಾಗಿ ಕೈ ಬೀಸುವುದನ್ನು ಗಮನಿಸಿ ಅಲ್ಲಿಗೆ ತೆರಳಿದ ಮೀನುಗಾರರು ಆ 8 ಮಂದಿಯನ್ನು ರಕ್ಷಣೆ ಮಾಡಿ ಕಲ್ತೆನಿಗೆ ಕರೆದುಕೊಂಡು ಹೋಗಿ ಉಪಚರಿಸಿ ಬಳಿಕ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು, ಅದರಂತೆ ಕೋಸ್ಟ್ ಗಾರ್ಡ್ ಸ್ಪೀಡ್ ಬೋಟಿನಲ್ಲಿ ಕಲ್ತೆನಿಗೆ ತೆರಳಿ 8 ಮಂದಿ ಮೀನುಗಾರರನ್ನು ಕೊಚ್ಚಿಗೆ ತಲುಪಿಸಿದ್ದಾರೆ.
ಅನ್ನ ನೀರು ಇಲ್ಲದೆ ಮೂರು ದಿಗಳ ಕಾಲ ಸಮುದ್ರ ಮಧ್ಯೆ ಸಾವು ಬದುಕಿನ ಹೋರಾಟದಲ್ಲಿದ್ದ 8 ಮೀನುಗಾರರಿಗೆ ಕಲ್ತೆನಿ ಮೀನುಗಾರರು ಸಕಾಲದಲ್ಲಿ ಸಿಗದೆ ಹೋಗಿದ್ದರೆ ಬಹುಷ ಬದುಕಿ ಉಳಿಯುವುದು ಕಷ್ಟವಾಗಿತ್ತು ಎಂದು ಬದುಕಿ ಬಂದ ಸಿಬಂದಿ ಪ್ರತಿಕ್ರೀಯಿಸಿದ್ದಾರೆ.