BELTHANGADI
ನೆಲ್ಯಾಡಿಯಲ್ಲಿ ಉದ್ಯಮಿಯ ಪುತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ನೆಲ್ಯಾಡಿ, ಜನವರಿ 04: ಯುವತಿಯೊಬ್ಬಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ನೆಲ್ಯಾಡಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ನೆಲ್ಯಾಡಿಯ ನವೀನ್ ಇಂಟರ್ ಲಾಕ್ ನ ಮಾಲೀಕ, ಉದ್ಯಮಿ ವಿ.ಜೆ. ಜೋಸೆಫ್ ಎಂಬವರ ಪುತ್ರಿ ನವ್ಯಾ ಜೋಸೆಫ್ ಎಂದು ಗುರುತಿಸಲಾಗಿದೆ.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಬಿವ ಪದವಿ ಮುಗಿಸಿದ್ದ ನವ್ಯ ಸದ್ಯ ಮನೆಯಲ್ಲಿದ್ದರು. ನಿನ್ನೆ ರಾತ್ರಿ 10-30ರ ವೇಳೆಗೆ ತನ್ನ ರೂಮಿನಲ್ಲಿ ಮಲಗಿದ್ದ ನವ್ಯಾ, ಇಂದು ಬೆಳಗ್ಗೆ 8 ಗಂಟೆಯಾದರೂ ಎದ್ದಿರಲಿಲ್ಲ. ಅವರ ತಾಯಿ ಕರೆದು ಪ್ರತಿಕ್ರಿಯೆ ನೀಡಿರಲಿಲ್ಲ. ಕೊನೆಗೆ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆಗಲೂ ಏನೂ ಪ್ರತಿಕ್ರಿಯೆ ಬಾರದೇ ಇದ್ದರಿಂದ ತಂದೆ ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಆಗ ಆಕೆ ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

ಯುವತಿ ಡೆತ್ ನೋಟ್ ಬರೆದಿಟ್ಟು ತನ್ನ ಬೆಡ್ ರೂಂನಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವು ಸುಟ್ಟು ಕರಕಲಾಗಿದೆ. ಇನ್ನು ಡೆತ್ ನೋಟಿನಲ್ಲಿ ಏನೂ ಮಾಹಿತಿ ಇದೆ ಅನ್ನೋದು ಗೊತ್ತಾಗಿಲ್ಲ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನವ್ಯಾ ತಂದೆ, ತಾಯಿ ಹಾಗೂ ಸಹೋದರ ಸಹೋದರಿಯನ್ನು ಅಗಲಿದ್ದಾರೆ.