Connect with us

LATEST NEWS

ಸಾಂಸ್ಥಿಕ ಕ್ವಾರಂಟೈನ್ ಗುನ್ನಾ – ವರದಿ ಬರುವ ಮುನ್ನವೇ ಮನೆಗೆ ತೆರಳಿದ್ದ ಸೋಂಕಿತರು ! 

ಸಾಂಸ್ಥಿಕ ಕ್ವಾರಂಟೈನ್ ಗುನ್ನಾ – ವರದಿ ಬರುವ ಮುನ್ನವೇ ಮನೆಗೆ ತೆರಳಿದ್ದ ಸೋಂಕಿತರು !  

ಉಡುಪಿ, ಜೂನ್ 2 : ರಾಜ್ಯ ಸರಕಾರ ಕ್ವಾರಂಟೈನ್ ಅವಧಿಯನ್ನು ಏಳು ದಿನಕ್ಕೆ ಇಳಿಸಿದ್ದು ಈಗ ಕರಾವಳಿ ಜಿಲ್ಲೆಗಳಲ್ಲಿ ಮುಳುವಾಗಿ ಪರಿಣಮಿಸಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಕೋವಿಡ್ ಪಾಸಿಟಿವ್ ಆಗಿರುವ 73 ಮಂದಿಯಲ್ಲಿ ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಿಂದ ಹೋಮ್ ಕ್ವಾರಂಟೈನ್ ಗೆ ಶಿಫ್ಟ್ ಆಗಿದ್ದರು. ಏಳು ದಿನಗಳ ಬಳಿಕ ಮನೆಗೆ ತೆರಳಿದ್ದ ಇವರ ಪೈಕಿ ಐವರ ಫೋನ್ ಸ್ವಿಚ್ ಆಫ್ ಆಗಿದ್ದು ಅವರನ್ನು ಪತ್ತೆ ಮಾಡುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ.

ಕ್ವಾರಂಟೈನ್ ನಲ್ಲಿದ್ದ ಮಂದಿಯನ್ನು ಏಳು ದಿನಗಳ ಗಡುವು ಪೂರೈಸಿದ ಕಾರಣಕ್ಕೆ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ರಾಜ್ಯ ಸರಕಾರ ನಿಯಮಾವಳಿ ಸರಳಗೊಳಿಸಿದ ನೆಪದಲ್ಲಿ ಜಿಲ್ಲಾಡಳಿತ ಕೂಡ ಅದರಂತೆ ಎಡವಟ್ಟು ಮಾಡಿತ್ತು.

ರಾಜ್ಯ ಸರಕಾರ ನಿಷೇಧ ವಿಧಿಸಿದ ಐದು ರಾಜ್ಯಗಳನ್ನು ಹೊರತುಪಡಿಸಿ ಬೇರೆ ರಾಜ್ಯಗಳ ಜನರಿಗೆ ಈ ನಿಯಮ ವಿಧಿಸಿದ್ದರೂ, ಉಡುಪಿ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಆಗಮಿಸಿದ್ದವರನ್ನೂ ಮನೆಗೆ ಕಳಿಸಿ, ಅವರ ಮೂಲಕ ಮನೆಯವರಿಗೂ ಸೋಂಕು ಹರಡುವಂತೆ ಮಾಡಿತ್ತು.

ಈಗ ಒಮ್ಮೆ ಮನೆಗೆ ತೆರಳಿದವರನ್ನು ಮತ್ತೆ ಆಸ್ಪತ್ರೆಗೆ ಕರೆತರುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ಉಡುಪಿ ಜಿಲ್ಲೆ ಒಂದರಲ್ಲೇ 7 ಸಾವಿರಕ್ಕೂ ಅಧಿಕ ಮಂದಿಯ ವರದಿ ಬರಲು ಬಾಕಿಯಿದೆ. ಹೀಗಿರುವಾಗ, ಏಳು ದಿನಗಳ ನಿಯಮಾವಳಿ ಪ್ರಕಾರ ಮನೆಗೆ ಕಳಿಸಿದರೆ ಈತನಕ ಹೇರಿದ ಲಾಕ್ ಡೌನ್ ಅರ್ಥವಿಲ್ಲದಾಗುತ್ತದೆ.

ವಿಶೇಷ ಅಂದರೆ, ಈಗ ಪಾಸಿಟಿವ್ ಬಂದವರಲ್ಲಿ ಯಾವುದೇ ರೋಗ ಲಕ್ಷಣವೂ ಇಲ್ಲ. ಈ ಕಾರಣದಿಂದ ಮನೆಗೆ ತೆರಳಿದವರನ್ನು ಮರಳಿ ಕರೆತರಲು ಆರೋಗ್ಯ ಕಾರ್ಯಕರ್ತರು ಮನವರಿಕೆ ಮಾಡಲು ಹರಸಾಹಸ ಪಡಬೇಕಾಗುತ್ತಿದೆ.

ಈಗ ವರದಿ ಬಂದಾಗ ಸಿಗದೇ ಇನ್ನು ಆರೋಗ್ಯ ಕಾರ್ಯಕರ್ತರು ಅಡ್ರಸ್ ಹುಡುಕಿ ತರುವಷ್ಟರಲ್ಲಿ ಅವರು ಮತ್ತೊಂದಷ್ಟು ಮಂದಿಗೆ ಕೊರೊನಾ ಪ್ರಸಾದ ಹಂಚಿಕೆ ಮಾಡಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂಥ ಪ್ರಮಾದಗಳಾಗಿದ್ದು ಸಾಂಸ್ಥಿಕ ಕ್ವಾರಂಟೈನ್ ಎಂಬ ನಿಯಮದ ಸರಳೀಕರಣವೇ ಈಗ ಕರಾವಳಿಯಲ್ಲಿ ತಿರುಗು ಬಾಣವಾಗುತ್ತಿದೆ. ಇಂಥ ಪ್ರಮಾದಗಳ ಕಾರಣದಿಂದಲೇ ಕರಾವಳಿ ಮತ್ತೆ ಹಾಟ್ ಸ್ಪಾಟ್ ಆಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *