Connect with us

LATEST NEWS

6 ದಿನದ ಹಸುಗೂಸನ್ನು ಆಸ್ಪತ್ರೆಯಿಂದ ಹೊರ ಹಾಕಿದ ಲೆಡಿಗೋಶನ್ ಮನೆ ಸೇರುತ್ತಿದ್ದಂತೆ ಮಗು ಸಾವು

6 ದಿನದ ಹಸುಗೂಸನ್ನು ಆಸ್ಪತ್ರೆಯಿಂದ ಹೊರ ಹಾಕಿದ ಲೆಡಿಗೋಶನ್ ಮನೆ ಸೇರುತ್ತಿದ್ದಂತೆ ಮಗು ಸಾವು

ಕಡಬ ಅಗಸ್ಟ್ 6: ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆರಿಗೆಯಾದ ಆರು ದಿನಗಳ ಹಸುಗೂಸೊಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ತಲುಪುವಷ್ಟರಲ್ಲಿಯೇ ಮೃತಪಟ್ಟಿರುವ ಘಟನೆ ಕಡಬದಲ್ಲಿ ಭಾನುವಾರದಂದು ನಡೆದಿದ್ದು, ವೈದ್ಯರ ಬೇಜವಾಬ್ದಾರಿಯಿಂದಾಗಿ ಮಗು ಮೃತಪಟ್ಟಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಕಾಯರಡ್ಕ ನಿವಾಸಿ ದಲಿತ ಕೂಲಿ ಕಾರ್ಮಿಕ ಶೇಖರ ಅವರ ಪತ್ನಿ ವಸಂತಿ ಎರಡನೇ ಹೆರಿಗೆಗಾಗಿ ಜುಲೈ 30 ರಂದು ಕಡಬದ ಸಮುದಾಯ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ ವೇಳೆಗೆ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ನಡೆದಿದ್ದು, ವಸಂತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. 2.65 ಕೆ.ಜಿ. ತೂಕವಿದ್ದ ಮಗು ಆರಂಭದಲ್ಲಿ ಆರೋಗ್ಯವಾಗಿತ್ತಾದರೂ ಆ ಬಳಿಕ ಸರಿಯಾಗಿ ಎದೆಹಾಲು ಉಣ್ಣುತ್ತಿರಲಿಲ್ಲ ಎಂದು ಮಗುವಿನ ಪೋಷಕರು ವೈದ್ಯರಿಗೆ ತಿಳಿಸಿದ್ದರು.

ಆದರೆ ಆಗಸ್ಟ್ 04 ಶನಿವಾರದಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಹೋಗುವಂತೆ ತಿಳಿಸಲಾಗಿತ್ತು. ಮಗು ಆರೋಗ್ಯವಾಗಿಲ್ಲ ಎನ್ನುವ ಕಾರಣಕ್ಕಾಗಿ ಪೋಷಕರು ಮಗುವಿನ ಜೊತೆಗೆ ರಾತ್ರಿ ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ಭಾನುವಾರ ಬೆಳಿಗ್ಗೆ ಅವರಿದ್ದ  ಬೆಡ್‍ಗೆ ಆಸ್ಪತ್ರೆಯವರು ಬೇರೆ ರೋಗಿಯನ್ನು ದಾಖಲಿಸಿದ್ದರು. ಮಗು ಹುಷಾರಿಲ್ಲ ಚಿಕಿತ್ಸೆ ನೀಡಿ ಎಂದು ವೈದ್ಯರಲ್ಲಿ ಮನವಿ ಮಾಡಿದರೂ ನಿಮ್ಮ ಮಗು ಆರೋಗ್ಯವಾಗಿದ್ದು, ನೀವು ಇಲ್ಲಿಯೇ ಉಳಿದುಕೊಳ್ಳಲು ಈ ರೀತಿಯ ನಾಟಕ ಮಾಡುತ್ತೀರಿ ಎಂದು ಬಲವಂತವಾಗಿ 108 ಅಂಬ್ಯುಲೆನ್ಸ್‍ನಲ್ಲಿ ಅವರನ್ನು ಕಡಬಕ್ಕೆ ಕಳುಹಿಸಿದ್ದಾರೆ.

ಅವರು ಕಡಬ ತಲುಪಿದ ಕೆಲವೇ ಹೊತ್ತಿನಲ್ಲಿ ಮಗು ಮೃತಪಟ್ಟಿದೆ ಎನ್ನಲಾಗಿದೆ. ಇದೀಗ ಈ ಬಡ ದಲಿತ ಕುಟುಂಬ ಅಸಹಾಯಕರಾಗಿ ಕಂಗಾಲಾಗಿದ್ದು, ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸುತ್ತಿದೆ. ಕಡಬ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಅವರು ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *