KARNATAKA
ಪ್ರಯಾಣಿಕನಿಂದ 5ಲಕ್ಷ ರೂ. ಹಣ ಕದ್ದು ಪರಾರಿಯಾಗುತ್ತಿದ್ದ ಆರೋಪಿಯನ್ನು ಸೆರೆ ಹಿಡಿದ KSRTC ಸಿಬ್ಬಂದಿ..!
ಬೆಂಗಳೂರು, ಜೂನ್ 16: ಕೆಎಸ್ಸಾರ್ಟಿಸಿ ಬಸ್ಸಿನ ಚಾಲಕನ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ಪ್ರಯಾಣಿಕನೊಬ್ಬ ಕಳಕೊಂಡ ಹಣ ವಾಪಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಚಾಲಕನ ಕಾರ್ಯಕ್ಕೆ ಮೆಚ್ಚುಗೆಗೆ ಸೂಚಿಸಿದ್ದಾರೆ.
ಬೆಂಗಳೂರು-ತಿರುನಲ್ಲಾರ್ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದ ಬಸ್ಸಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಪಕ್ಕದ ಸೀಟಲ್ಲಿ ಕುಳಿತಿದ್ದ ಪ್ರಯಾಣಿಕ ದಂಪತಿಯು ಊಟಕ್ಕಾಗಿ ಕೆಳಗಿಳಿದಿದ್ದಾಗ 5ಲಕ್ಷ ರೂ.ಹಣವನ್ನು ಕದ್ದು, ಎಲೆಕ್ಟ್ರಾನಿಕ್ ಸಿಟಿ ಸಿಗ್ನಲ್ ಬಳಿ ಇಳಿದು ಓಡಿಹೋಗುತ್ತಿದ್ದ.
ಇದನ್ನು ಗಮನಿಸಿದ ಚಾಲಕ ಮಂಜುನಾಥ್ ಹಾಗೂ ನಿರ್ವಾಹಕ ಸೋಮಪ್ಪ ಟಿ.ಎನ್. ಸದರಿ ಕಳ್ಳ ಪ್ರಯಾಣಿಕನನ್ನು ಬೆನ್ನಟ್ಟಿ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ, ಶೌರ್ಯ ಮೆರೆದಿರುತ್ತಾರೆ.
ಈ ಘಟನೆ ಬಗ್ಗೆಸಂತಸ ವ್ಯಕ್ತಪಡಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸದರಿ ಸಿಬ್ಬಂದಿಗಳ ಸಮಯ ಪ್ರಜ್ಞೆ, ಧೈರ್ಯ, ಸಾಹಸ ಮತ್ತು ಪ್ರಯಾಣಿಕರ ಬಗೆಗಿನ ಕಾಳಜಿಯು ಪ್ರಶ್ನಾತೀತ. ಇಂತಹ ಸಿಬ್ಬಂದಿಗಳೇ ಸಂಸ್ಥೆಯ ಹೆಮ್ಮೆ ಮತ್ತು ಗೌರವ. ಇವರ ಈ ಕಾರ್ಯವು ಇತರ ಸಿಬ್ಬಂದಿಗೆ ಮಾದರಿ ಎಂದು ಅಭಿನಂದಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.