KARNATAKA
ಶಿವಮೊಗ್ಗ: ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವು

ಶಿವಮೊಗ್ಗ, ಸೆಪ್ಟೆಂಬರ್ 25: ಜಿಲ್ಲೆಯ ಆಯನೂರು ಸಮೀಪದ ಚನ್ನಹಳ್ಳಿಗೆ ಭಾನುವಾರ ಬೆಳಗಿನ ಜಾವ ಆಹಾರ ಅರಸಿ ಬಂದ ಎರಡು ಗಂಡು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ.ಚನ್ನಹಳ್ಳಿಯ ಚಂದ್ರಾ ನಾಯಕ್ ಎಂಬುವವರು ಕಾಡಂಚಿನ ಮೂರು ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಳೆ ರಕ್ಷಣೆಗೆ ಹೊಲಕ್ಕೆ ಸುತ್ತಲೂ ಬೇಲಿ ಹಾಕಿ ಅದಕ್ಕೆ ಮೇನ್ ಲೈನ್‌ನಿಂದಲೇ ವಿದ್ಯುತ್ ಸಂಪರ್ಕ ನೀಡಿದ್ದಾರೆ.
ಪ್ರತಿ ಮಳೆಗಾಲದಂತೆ ಈ ಬಾರಿಯೂ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಭದ್ರಾ ಅಭಯಾರಣ್ಯದಿಂದ ಏಳು ಆನೆಗಳು ಬಂದಿವೆ. ಅದರಲ್ಲಿ ಎರಡು ಸಮೀಪದ ಆನೆಸರದ ಮೂಲಕ ಚನ್ನಹಳ್ಳಿಯ ಹೊಲಕ್ಕೆ ಹೋಗಿವೆ. ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿವೆ. ಸಾವಿಗೀಡಾದ ಸಲಗಗಳ ವಯಸ್ಸು 14ರಿಂದ 15 ಇದೆ ಎಂದು ತಿಳಿದುಬಂದಿದೆ.

ಎರಡೂ ಆನೆಗಳ ಮರಣೋತ್ತರ ಪರೀಕ್ಷೆ ಸಂಜೆ ಸ್ಥಳದಲ್ಲಿ ನಡೆಯಿತು. ಅಂತ್ಯಕ್ರಿಯೆ ಅಲ್ಲಿಯೇ ನೆರವೇರಿತು. ಹೊಲದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.