LATEST NEWS
ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಜೀವ ತೆಗೆದ ಯುವತಿ!
ಚೆನ್ನೈ, ಜನವರಿ 04: ಅತ್ಯಾಚಾರವೆಸಗಿ ಸಂತ್ರಸ್ತೆಯನ್ನು ಕೊಂದಿರುವ ಘಟನೆಗಳು ವರದಿಯಾಗುವದು ಸಾಮಾನ್ಯ, ಆದರೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಯುವತಿ ಕೊಲೆ ಮಾಡಿದ್ದಾಳೆ.
26 ವರ್ಷದ ಅಜಿತ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. 19 ವರ್ಷದ ಯುವತಿ ಶೋಲಾವರಂನಲ್ಲಿ ಇರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ಸಮೀಪದಲ್ಲೇ ಕುದುರೆಫಾರಂ ಬಳಿಯಿರುವ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಜಿತ್ ಆಕೆಯನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮದ್ಯಪಾನ ಮಾಡಿದ್ದ ಅಜಿತ್ ಚಾಕು ತೋರಿಸಿ ಬೆದರಿಸಿ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆತನನ್ನು ದೂರಕ್ಕೆ ತಳ್ಳಿದ್ದಾಳೆ. ಅಜಿತ್ ಕೆಳಗೆ ಬೀಳುತ್ತಿದ್ದಂತೆ ಆಕ್ರೋಶಗೊಂಡ ಯುವತಿ ಚಾಕು ಕಸಿದುಕೊಂಡು ಕುತ್ತಿಗೆ ಇರಿದಿದ್ದಾಳೆ. ಇದರಿಂದಾಗಿ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶೋಲಾವರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ಸ್ ಪೆಕ್ಟರ್ ನಾಗಲಿಂಗಂ ಈ ಬಗ್ಗೆ ಮಾಹಿತಿ ನೀಡಿ, ಯುವತಿಯಿಂದ ಹೇಳಿಕೆ ಪಡೆಯಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು ಇರುವ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಮೃತ ಯುವಕ ಸಂತ್ರಸ್ತೆಗೆ ಸಂಬಂಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ.