LATEST NEWS
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆ-ಗಾಳಿಗೆ 167.63 ಕೋಟಿ ರೂ. ನಷ್ಟ..!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಸುರಿದ ಗಾಳಿ ಮಳೆ ಅಪಾರ ಹಾನಿಯನ್ನುಂಟು ಮಾಡಿದ್ದು ಜಿಲ್ಲೆಯಲ್ಲಿ 167.63 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆಯಾಗಿದ್ದರೂ, ಮಳೆಯೊಂದಿಗೆ ಗಾಳಿಯೂ ಸೇರಿದ್ದರಿಂದ ಆಗಿರುವ ಹಾನಿಯ ಪ್ರಮಾಣ ಅತ್ಯಧಿಕವಾಗಿದೆ. ಪ್ರಸ್ತುತ ವರ್ಷದ ಎಪ್ರಿಲ್‌ನಿಂದ ಈವರೆಗೆ ಹಾನಿಯಾದ ಮೂಲಸೌಕರ್ಯಗಳ ಅಂದಾಜು ನಷ್ಟ 167.63 ಕೋಟಿ ರೂ.ಗಳೆಂದು ಲೆಕ್ಕ ಹಾಕಲಾಗಿದೆ. ಜಿಲ್ಲಾಧಿಕಾರಿ ಕಚೇರಿ ನೀಡಿರುವ ಮಾಹಿತಿಯಂತೆ ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ 40 ಮನೆಗಳು ಸಂಪೂರ್ಣ ಹಾಗೂ 541 ಮನೆಗಳಿಗೆ ಭಾಗಶ: ಹಾನಿಯಾಗಿದೆ. ಇದರೊಂದಿಗೆ 59 ದನದ ಕೊಟ್ಟಿಗೆಗಳಿಗೂ ಹಾನಿಯಾಗಿದೆ. 62.3 ಹೆಕ್ಟೇರ್ ತೋಟಗಾರಿಕಾ ಬೆಳೆಗಲಿಗೆ, 141.39 ಹೆಕ್ಟೇರ್ ಕೃಷಿ ಬೆಳೆಗೂ ಹಾನಿಯುಂಟಾಗಿದೆ. ಭತ್ತದ ಕೃಷಿ ಭೂಮಿ ಈಗಲೂ ಜಲಾವೃತವಾಗಿದ್ದು ಅವುಗಳಿಗಾದ ಹಾನಿಯನ್ನು ಇನ್ನಷ್ಟೇ ಅಂದಾಜಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ :
ಜಿಲ್ಲೆಗೆ ರೆಡ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿರುವುದರಿಂದ, ಮುಂಜಾಗೃತಾ ಕ್ರಮವಾಗಿ ಇಂದು (ಆ.1) ಕೂಡ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐಗಳಿಗೆ ರಜೆ ಇರುವುದಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧಪಟ್ಟವರಿಗೆ ಸೂಚನೆಗಳನ್ನು ನೀಡಲಾಗಿದೆ.