DAKSHINA KANNADA
ಅಪಾಯಕಾರಿ ಭೂ ಕುಸಿತ ಪ್ರದೇಶದಲ್ಲಿ ಸಾಕು ನಾಯಿಗಾಗಿ 14 ಕಿಲೋ ಮೀಟರ್ ಅಲೆದಾಟ
ಅಪಾಯಕಾರಿ ಭೂ ಕುಸಿತ ಪ್ರದೇಶದಲ್ಲಿ ಸಾಕು ನಾಯಿಗಾಗಿ 14 ಕಿಲೋ ಮೀಟರ್ ಅಲೆದಾಟ
ಮಂಗಳೂರು ಅಗಸ್ಟ್ 20: ಜೋಡುಪಾಲದ ಭೂಕುಸಿತದಿಂದಾಗಿ ಮನೆ ತೊರೆದಿದ್ದ ವ್ಯಕ್ತಿಯೊಬ್ಬರು ತನ್ನ ಸಾಕುನಾಯಿಗಾಗಿ ಸುಮಾರು 14 ಕಿಲೋಮೀಟರ್ ದೂರ ಅಪಾಯಕಾರಿ ಪ್ರದೇಶಗಳಲ್ಲಿ ನಡೆದು ಬಂದು ಮನೆಯಲ್ಲೇ ಉಳಿದಿದ್ದ ನಾಯಿಯನ್ನು ರಕ್ಷಿಸಿದ್ದಾರೆ.
ನಿತಿನ್ ಎನ್ನುವ ವ್ಯಕ್ತಿಯೇ ತನ್ನ ನಾಯಿಗಾಗಿ ಸುಮಾರ 14 ಕಿಲೋ ಮೀಟರ್ ನಡೆದು ತನ್ನ ನಾಯಿಯನ್ನು ರಕ್ಷಿಸಿದವರು. ಇವರು ಜೋಡುಪಾಲದ ನಿವಾಸಿಯಾಗಿದ್ದು, ಭೂ ಕುಸಿತದ ಹಿನ್ನಲೆಯಲ್ಲಿ ಎರಡು ದಿನಗಳ ಹಿಂದೆಯೇ ಅವರು ಮನೆ ಖಾಲಿ ಮಾಡಿ ಮಡಿಕೇರಿಯಲ್ಲಿ ಉಳಿದಿದ್ದರು. ಮನೆಯಿಂದ ಹೊರಡುವ ವೇಳೆ ಅವರಿಗೆ ನಾಯಿಯ ಬಗ್ಗೆ ಗಮನಹರಿಸಲು ಆಗಿಲ್ಲ. ಈ ನಡುವೆ ನಾಯಿ ಮನೆಯಲ್ಲೇ ಉಳಿದಿರುವ ವಿಷಯ ಶನಿವಾರ ಸಂಜೆ ಅವರಿಗೆ ಗೊತ್ತಾಗಿತ್ತು.
ಪ್ರೀತಿಯ ನಾಯಿಯನ್ನು ರಕ್ಷಿಸಲೇಬೇಕು ಎಂದು ಪಣತೊಟ್ಟಿದ್ದ ನಿತಿನ್ ಅದಕ್ಕಾಗಿ ಭಾನುವಾರ ಬೆಳಿಗ್ಗೆಯೇ ಮನೆಗೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು. ಭಾನುವಾರ ಬೆಳಿಗ್ಗೆಯೇ ಮಡಿಕೇರಿಯಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಭೂ ಕುಸಿತದಿಂದಾಗಿ ನಡೆದಾಡಲು ಅಸಾಧ್ಯವಾಗಿರುವ ಮದೆನಾಡು, ಜೋಡುಪಾಲದವರೆಗಿನ ಪ್ರದೇಶಗಳಲ್ಲಿ ರಸ್ತೆ ಮೇಲೆ ಬಿದ್ದಿರುವ ಮಣ್ಣು, ಕಲ್ಲು, ಮರದ ರಾಶಿಯನ್ನು ಏರುತ್ತಾ, ಇಳಿಯುತ್ತಾ 14 ಕಿ.ಮೀ. ಕ್ರಮಿಸಿ ಮಧ್ಯಾಹ್ನದ ವೇಳೆಗೆ ಜೋಡುಪಾಲದಲ್ಲಿ ತಮ್ಮ ಮನೆ ತಲುಪಿದ್ದಾರೆ. ಇವರನ್ನು ನೋಡುತ್ತಲೇ ಹಸಿವಿನಿಂದ ಬಳಲಿದ್ದ ನಾಯಿ ನಿತಿನ್ ಅವರನ್ನು ಬಾಚಿ ತಬ್ಬಿಕೊಂಡಿತು. ಸಾಕು ಪ್ರಾಣಿಯನ್ನು ಕಂಡು ಕಣ್ಣೀರಾದ ಅವರು, ಅದನ್ನು ಸಂಪಾಜೆಗೆ ಕರೆತರಲು ಮುಂದಾದರು.
ಅವರ ಈ ಕಾರ್ಯಕ್ಕೆ ಎನ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನೆರವಾದರು. ಜೋಡುಪಾಲ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ರಸ್ತೆಯ ಮೇಲೆ ಹರಿಯುತ್ತಿದ್ದ ತೊರೆಯನ್ನು ದಾಟಿ ಬರಲು ವ್ಯವಸ್ಥೆ ಮಾಡಿದರು. ಬಳಿಕ ನಾಯಿಯನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ತಮ್ಮ ಮನೆಯತ್ತ ಸಾಗಿದರು.