DAKSHINA KANNADA
ಪ್ರೇಕ್ಷಾ ಆತ್ಮಹತ್ಯೆ ಪ್ರಕರಣದ ಆರೋಪಿ ಯತೀನ್ ರಾಜ್ಗೆ 14 ದಿನಗಳ ನ್ಯಾಯಾಂಗ ಬಂಧನ
ಉಳ್ಳಾಲ, ಮಾರ್ಚ್ 15 : ಪ್ರೇಕ್ಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಬಂಧಿತನಾಗಿರುವ ಆಕೆಯ ಗೆಳೆಯ ಯತೀನ್ ರಾಜ್ಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಕಳೆದ ಮಾರ್ಚ್ 10 ರಂದು ಕುಂಪಲ ಆಶ್ರಯಕಾಲನಿ ನಿವಾಸಿ ಪ್ರೇಕ್ಷಾ(17) ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೆತ್ತವರು ಹಾಗೂ ಸ್ಥಳೀಯರು ಕೊಲೆ ಶಂಕೆ ವ್ಯಕ್ತಪಡಿಸಿ ಗಾಂಜಾ ಗ್ಯಾಂಗ್ ಕೃತ್ಯ ಶಂಕಿಸಲಾಗಿತ್ತು. ಅದರಂತೆ ಉಳ್ಳಾಲ ಪೊಲೀಸರು ಪ್ರೇಕ್ಷಾ ಆತ್ಮಹತ್ಯೆ ಸಂದರ್ಭ ಮನೆಗೆ ಬಂದಿದ್ದ ಗೆಳೆಯ ಸಹಿತ ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನೆಡೆಸಿದ್ದರು.
ಪ್ರಕರಣದಲ್ಲಿ ಸಿಕ್ಕ ಸಾಕ್ಷಿಯಂತೆ ಗೆಳೆಯ ಯತೀನ್ ರಾಜ್ ನನ್ನು ಬಂಧಿಸಲಾಗಿದ್ದು, ಮತ್ತಿಬ್ಬರನ್ನು ಬಿಡುಗಡೆ ಗೊಳಿಸಲಾಗಿದೆ. ಮಾಡೆಲಿಂಗ್ ಶೂಟ್ಗೆ ಬೆಂಗಳೂರಿಗೆ ತೆರಳುವುದನ್ನು ಗೆಳೆಯ ಯತೀನ್ ವಿರೋಧಿಸಿದ ಹಿನ್ನೆಲೆ ಪ್ರೇಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ವಿಚಾರ ಪೊಲೀಸರಿಂದ ತಿಳಿದು ಬಂದಿದೆ.
ಆಶ್ರಯಕಾಲನಿಯಲ್ಲಿ ಗಾಂಜಾ ಪತ್ತೆಯ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಂಜಾ ಸೇವಿಸುತ್ತಿದ್ದ ಮತ್ತೆ 15 ಮಂದಿಯ ಪಟ್ಟಿ ತಯಾರಿಸಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.