LATEST NEWS
ಹನ್ನೆರಡು ಆವೃತ್ತಿ ಕಳೆದರೂ ಆರ್‌ಸಿಬಿಯಲ್ಲೇ ಉಳಿಯಲು ಕಾರಣ ಕೊಟ್ಟ ಕೊಹ್ಲಿ!
ಹೊಸದಿಲ್ಲಿ: ಜಗತ್ತಿನ ಐಶಾರಾಮಿ ಟಿ20 ಕ್ರಿಕೆಟ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಈವರೆಗೆ ಒಟ್ಟು 12 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಂದಹಾಗೆ ಐಪಿಎಲ್ ಇತಿಹಾಸದ ಎಲ್ಲಾ ಆವೃತ್ತಿಗಳಲ್ಲಿ ಒಂದೇ ತಂಡದಲ್ಲಿ ಆಡಿದ ಏಕಮಾತ್ರ ಆಟಗಾರ ಎಂಬ ಹೆಗ್ಗಳಿಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರದ್ದು.
ಹಲವು ಆಟಗಾರರು 5-6 ಫ್ರಾಂಚೈಸಿ ತಂಡಗಳನ್ನು ಪ್ರತಿನಿಧಿಸಿದ ಉದಾಹರಣೆಗಳಿವೆ. ಆದರೆ, ಯುವ ಪ್ರತಿಭೆಯಾಗಿ 2008ರ ಐಪಿಎಲ್‌ಗೆ ರಾಹುಲ್ ದ್ರಾವಿಡ್ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡ ಕಿಂಗ್ ಕೊಹ್ಲಿ ಒಂದೇ ತಂಡದಲ್ಲಿ ದಶಕಕ್ಕೂ ಹೆಚ್ಚು ಕಾಲ ಆಡಿದ್ದಾರೆ.
ಮೊದಲ ಎರಡು ಆವೃತ್ತಿಗಳಲ್ಲಿ ಕೊಹ್ಲಿ ಅಷ್ಟೇನೂ ಅಬ್ಬರಿಸದೇ ಇದ್ದರು ಕೂಡ ಆರ್‌ಸಿಬಿ ತನ್ನ ಭವಿಷ್ಯದ ಬಹುದೊಡ್ಡ ತಾರೆಯನ್ನು ತನ್ನಲ್ಲಿಯೇ ಉಳಿಸಿಕೊಂಡು ಬಂದಿತ್ತು. ತಂಡದ ಈ ತಾಳ್ಮೆಗೆ ಅಮೋಘ ಕೊಡುಗೆಯೇ ಲಭ್ಯವಾಗಿ ಐಪಿಎಲ್‌ನ ಸಾರ್ವಕಾಲಿಕ ಯಶಸ್ವಿ ಬ್ಯಾಟ್ಸ್‌ಮನ್‌ನ ಸೇವೆ ಸಿಕ್ಕಂತಾಗಿದೆ. ಇನ್ನು 2013ರಲ್ಲಿ ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಂಡ ಕೊಹ್ಲಿ 2016ರ ಆವೃತ್ತಿಯಲ್ಲಿ ಫೈನಲ್‌ಗೂ ಮುನ್ನಡೆಸಿದ್ದರು.
ಇದೀಗ ಯುಎಇ ಅಂಗಣದಲ್ಲಿ ಆರಂಭವಾಗಲಿರುವ ಐಪಿಎಲ್ 2020 ಟೂರ್ನಿಯಲ್ಲೂ ತಂಡದ ಸಾರಥ್ಯ ವಹಿಸಿಕೊಂಡಿರುವ 31 ವರ್ಷದ ಬಲಗೈ ಬ್ಯಾಟ್ಸ್‌ಮನ್, ಈ ಸಂದರ್ಭದಲ್ಲಿ ತಾವು ಆರ್‌ಸಿಬಿ ತಂಡದಲ್ಲೇ ಉಳಿದುಕೊಳ್ಳಲು ಇರುವ ಬಹುಮುಖ್ಯ ಕಾರಣ ಏನೆಂಬುದನ್ನು ಬಹಿರಂಗ ಪಡಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಂಡದಲ್ಲಿ ಆಡಿ ಒಂದು ವಿಶೇಷ ಬಾಂಧವ್ಯ ಬೆಳೆದಿದ್ದು, ತಂಡವನ್ನು ತೊರೆಯುವ ಆಲೋಚನೆಯೇ ತಮ್ಮಲ್ಲಿ ಯಾವುದೇ ಕಾರಣಕ್ಕೂ ಬಂದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವುದು ತಮ್ಮ ಬಹುದೊಡ್ಡ ಗುರಿಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.
“ತಂಡದೊಂದಿಗೆ 12 ವರ್ಷ ಕಳೆದಿದ್ದೇನೆ. ಇದೊಂದು ನಂಬಲು ಸಾಧ್ಯವಾಗದ ಅದ್ಭುತ ಪಯಣ. ತಂಡದಲ್ಲಿನ ಪ್ರತಿಯೊಬ್ಬರಿಗೂ ಆರ್‌ಸಿಬಿ ಸಲುವಾಗಿ ಪ್ರಶಸ್ತಿ ಗೆಲ್ಲಲೇ ಬೇಕಿರುವ ಮಹತ್ವವನ್ನು ಅರಿತಿದ್ದಾರೆ. ಏಕೆಂದರೆ ಮೂರು ಬಾರಿ ಪ್ರಶಸ್ತಿ ಹತ್ತಿರ ಕಾಲಿಟ್ಟು ವೈಫಲ್ಯ ಅನುಭವಿಸಿದ್ದೇವೆ,” ಎಂದು ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮ ಸಲುವಾಗಿ ನಿರೂಪಕ ದಾನಿಶ್ ಸೇಟ್ ನಡೆಸಿಕೊಟ್ಟ ಸಂದರ್ಶನದಲ್ಲಿ ವಿರಾಟ್ ಮಾತನಾಡಿದ್ದಾರೆ. ಈ ವಿಡಿಯೋವನ್ನು ಆರ್‌ಸಿಬಿ ತನ್ನ ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದೆ.
“ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಬೇಕು ಎಂಬುದು ಬಹುದೊಡ್ಡ ಕನಸು. ಯಾವುದೇ ಸಮಯದಲ್ಲಿ ಅದೆಂಥದ್ದೇ ಸಂದರ್ಭದಲ್ಲಿ ನಾನು ತಂಡವನ್ನು ತೊರೆಯುವ ಬಗ್ಗೆ ಆಲೋಚನೆ ಮಾಡಲಾರೆ. ಏಕೆಂದರೆ ಅಷ್ಟು ಪ್ರೀತಿ ಮತ್ತು ಕಾಳಜಿ ನನಗೆ ತಂಡದಿಂದ ಸಿಕ್ಕಿದೆ,” ಎಂದು ಹೇಳಿದ್ದಾರೆ.
Up close and personal with Virat Kohli who talks about getting back on the cricket field after a long break, the feeling of welcoming a third member to his clan and much more! 🤩#PlayBold #IPL2020 #WeAreChallengershttps://t.co/mdWo6rbdh8
— Royal Challengers Bangalore (@RCBTweets) September 1, 2020
“ನಿಮ್ಮ ಪ್ರದರ್ಶನ ಉತ್ತಮವಾಗಿರಲಿ ಅಥವಾ ಕೆಟ್ಟದ್ದಾಗಿರಲಿ ತಂಡಕ್ಕೆ ಅಭಿಮಾನಿಗಳಿಂದ ಸಿಗುವ ಪ್ರೀತಿ ಮತ್ತು ಬೆಂಬಲದಲ್ಲಿ ಎಂದಿಗೂ ಕೊರತೆ ಎದುರಾಗಲಿಲ್ಲ. ಇದು ನಂಬಲು ಸಾಧ್ಯವಾಗದೇ ಇರುವಂಥದ್ದು. ನಮ್ಮ ತಂಡ ಹೇಗಾದರೂ ಆಡಲಿ ನಾನು ಐಪಿಎಲ್ ಆಡುವವರೆಗೂ ಆರ್‌ಸಿಬಿ ತಂಡವನ್ನು ತೊರೆಯುವುದಿಲ್ಲ,” ಎಂದಿದ್ದಾರೆ.
ಕೊಹ್ಲಿ ಐಪಿಎಲ್‌ನಲ್ಲಿ ಒಟ್ಟು ಐದು ಶತಕಗಳನ್ನು ಒಳಗೊಂಡ 5,412 ರನ್‌ಗಳನ್ನು ಬಾರಿಸಿದ್ದಾರೆ. 2016ರ ಆವೃತ್ತಿ ಒಂದರಲ್ಲೇ 900ಕ್ಕೂ ಹೆಚ್ಚು ರನ್ ಗಳಿಸಿ 4 ಶತಕಗಳೊಂದಿಗೆ ತಂಡವನ್ನು ಫೈನಲ್‌ಗೆ ಮುನ್ನಡೆಸಿದ್ದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಅಚ್ಚರಿಯ ಸೋಲೆದುರಾಗಿತ್ತು. ಆದರೆ ಈ ವರ್ಷ ಯುಎಇ ಅಂಗಣದಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದೆ.
Facebook Comments
You may like
-
4ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲವು – ಸರಣಿ ಗೆದ್ದ ಭಾರತ
-
ತೆಂಡುಲ್ಕರ್ ಪುತ್ರ ಅರ್ಜುನ್ ಮುಂಬೈ ಸೀನಿಯರ್ಸ್ ತಂಡಕ್ಕೆ
-
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎದೆನೋವು : ಆಸ್ಪತ್ರೆಗೆ ದಾಖಲು
-
ಆಸ್ಟ್ರೇಲಿಯಾ ವಿರುದ್ದ 8 ವಿಕೆಟ್ಗಳ ಜಯ ಸಾಧಿಸಿದ ಭಾರತ
-
ಆಸ್ಟ್ರೇಲಿಯಾ ಟೆಸ್ಟ್ ಸರಣಿ ಆರಂಭಿಕ ಬ್ಯಾಟ್ಸಮನ್ ಚೇತೇಶ್ವರ ಪೂಜಾರ 100 ಎಸೆತಗಳಲ್ಲಿ ಗಳಿಸಿದ್ದು 18 ರನ್
-
ಕರ್ನಾಟಕ ಕ್ರಿಕೆಟ್ ಪ್ರೇಮಿಗಳಿಗೆ ಬಹಳ ಕಠಿಣ – ಇಂದಿನ ಪಂದ್ಯದ ಬಗ್ಗೆ ಕಿಚ್ಚ ಸುದೀಪನ ಮಾತು
You must be logged in to post a comment Login