LATEST NEWS
ಅಪರಿಚಿತ ವಾಹನ ಡಿಕ್ಕಿ: 114 ವರ್ಷದ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಸಾವು

ಚಂಡೀಗಢ, ಜುಲೈ 15: ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹಿರಿಯ ಮ್ಯಾರಥಾನ್ ಓಟಗಾರ ಫೌಜಾ ಸಿಂಗ್ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
114 ವರ್ಷದ ಸಿಂಗ್, ಪಂಜಾಬ್‌ನ ಜಲಂದರ್ ಜಿಲ್ಲೆಯ ಬಿಯಾಸ್ ಗ್ರಾಮದಲ್ಲಿ ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ವಾಹನವೊಂದು ಡಿಕ್ಕಿ ಹೊಡೆದಿದ್ದು, ತಲೆಗೆ ತೀವ್ರವಾಗಿ ಪೆಟ್ಟು ಬಿದ್ದಿತ್ತು, ಇದರಿಂದಾಗಿ ಸೋಮವಾರ ಸಂಜೆ ಅವರು ನಿಧನರಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಂಗ್ ಅವರ ನಿಧನದ ಕುರಿತು ಪಂಜಾಬ್‌ನ ಮಾಜಿ ರಾಜ್ಯ ಮಾಹಿತಿ ಆಯುಕ್ತ, ಲೇಖಕ ಖುಷ್ಟಂತ್ ಸಿಂಗ್ ದೃಢಪಡಿಸಿದ್ದಾರೆ. ಖುಷ್ಕಂತ್ ಅವರು, ಫೌಜಾ ಸಿಂಗ್ ಕುರಿತಾದ ಜೀವನ ಚರಿತ್ರೆ ‘ದಿ ಟರ್ಬನ್ಸ್ ಟೊರ್ನಾಡೊ’ಯನ್ನು ಬರೆದಿದ್ದಾರೆ.
1911ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ್ದ ಸಿಂಗ್ ಕಿರಿಯ ಸಹೋದರನಾಗಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳ ಗೆದ್ದ ಸಾಧನೆ ಸಿಂಗ್ ಅವರದ್ದು. ಸಿಂಗ್ ಅವರ ಓಟದ ವೈಖರಿ, ಸಹಿಷ್ಣುತೆಯಿಂದಾಗಿ ಅವರನ್ನು ‘ಟರ್ಬನ್ಸ್ ಟೊರ್ನಾಡೊ’ ಎಂದೇ ಕರೆಯಲಾಗುತ್ತಿತ್ತು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸಿಂಗ್ ಜ್ಯೋತಿ ಹಿಡಿದಿದ್ದರು.
ಪ್ರಧಾನಿ ಮೋದಿ ಸಂತಾಪ
ಫೌಜಾ ಸಿಂಗ್ ಅವರ ನಿಧನಕ್ಕೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಫೌಜಾ ಸಿಂಗ್ ವಿಶಿಷ್ಟ ವ್ಯಕ್ತಿತ್ವದಿಂದ ಪರಿಚಿತರು. ಭಾರತದ ಯುವಕರಿಗೆ ಫಿಟೈಸ್ ಎಂಬ ಪ್ರಮುಖ ವಿಷಯದ ಬಗ್ಗೆ ಸ್ಫೂರ್ತಿ ನೀಡಿದ ರೀತಿ ಅಸಾಧಾರಣವಾಗಿದೆ. ಅವರು ಅದ್ಭುತ ದೃಢನಿಶ್ಚಯ ಹೊಂದಿದ್ದ ಕ್ರೀಡಾಪಟುವಾಗಿದ್ದರು. ಅವರ ನಿಧನ ನೋವಿನ ಸಂಗತಿಯಾಗಿದೆ. ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಇರುವ ಅಸಂಖ್ಯಾತ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಬರಲಿ’ ಎಂದು ಬರೆದುಕೊಂಡಿದ್ದಾರೆ.