Connect with us

    DAKSHINA KANNADA

    ದೇಶದಾದ್ಯಂತ ನಾಗರಪಂಚಮಿ ಸಂಭ್ರಮ..

    ಮಂಗಳೂರು,ಜುಲೈ27: ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದಪಂಚಮಿಯಂದು ಆಚರಿಸಲಾಗುತ್ತದೆ.ಕರಾವಳಿಯಲ್ಲಿ ನಾಗದೇವರಿಗೆ ವಿಶಿಷ್ಟ ಪ್ರಾಧಾನ್ಯತೆಯಿದ್ದು, ಈ ನಾಡನ್ನು ನಾಗನ ಭೂಮಿ ಎಂದೂ ನಂಬಲಾಗಿದೆ. ನಾಗರಪಂಚಮಿಯಂದು ವಿಶೇಷವಾಗಿ ನಾಗ ದೇವತೆಯನ್ನು ಪೂಜಿಸಲಾಗುತ್ತದೆ.ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ತರವಾಡು ಮನೆಗೆ ಭೇಟಿ ನೀಡಿ ಅಲ್ಲಿರುವ ನಾಗನ ವಿಗ್ರಹಕ್ಕೆ ಹಾಲೆರೆಯುವುದು ಹಾಗೂ ಸೀಯಾಳಾಭಿಷೇಕ ಮಾಡುವುದು ಈ ದಿನದ ವಿಶೇಷತೆಯಾಗಿದೆ. ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಈ ದಿನ ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವಾಗಿಯೂ ಪ್ರತೀತಿ ಪಡೆದಿದೆ.

    ನಾಗ ಪಂಚಮಿ ಕಥೆ.
    ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ಬಂದ ನಾಗರಹಾವೊಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ – ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು ಎನ್ನುವ ಕಥೆಯು ಪ್ರಚಲಿತದಲ್ಲಿದೆ.

    ಪುರಾಣ.
    ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು, ಭೂಲೋಕದಲ್ಲಿ ಸರ್ಪಸಂಕುಲವನ್ನು ನಿರ್ನಾಮ ಮಾಡಲು ‘ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾದ ಆಸ್ತಿಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡನು. ಜನಮೇಜಯ ರಾಜನು ‘ವರವನ್ನು ಕೇಳು’ ಎಂದು ಹೇಳಿದಾಗ, ಆಸ್ತಿಕನು ಪ್ರಾಣಿಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿಕೊಂಡನು. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪಯಜ್ಞವನ್ನು ನಿಲ್ಲಿಸಿದ ದಿನ ಪಂಚಮಿಯಾಗಿತ್ತು.

    ನಾಗ ಪಂಚಮಿಯ ವೈಶಿಷ್ಟ್ಯ.
    ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚಪ್ರಾಣಗಳೇ ಪಂಚನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇಷನಾಗ ಮತ್ತು ಶ್ರೀವಿಷ್ಣುವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು “ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚಪ್ರಾಣದ ಶುದ್ಧಿಯಾಗಲಿ”

    ಉಪವಾಸದ ಮಹತ್ವ.
    ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ೫ ಯುಗಗಳ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ್ಯು ಹೊಂದಿದನು. ಆಗ ಸಹೋದರನ ಮೃತ್ಯುವಿನ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಆದುದರಿಂದ ಆ ದಿನ ಸ್ತ್ರೀಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. ‘ಸಹೋದರನಿಗೆ ಅಖಂಡ ಆಯುಷ್ಯವು ದೊರಕಲಿ, ಅನೇಕ ಆಯುಧಗಳು ಪ್ರಾಪ್ತವಾಗಲಿ ಮತ್ತು ಅವನು ಪ್ರತಿಯೊಂದು ದುಃಖ ಮತ್ತು ಸಂಕಟ ಗಳಿಂದ ಪಾರಾಗಲಿ’ ಎನ್ನುವುದು ಸಹ ಈ ಉಪವಾಸದ ಹಿಂದಿನ ಕಾರಣವಾಗಿದೆ.

    ನಾಗನ ಮಹಾತ್ಮೆ.
    ‘ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿಷ್ಣುವಿನ ತಮೋಗುಣದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸಿರುತ್ತಾನೆ.
    “ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಮ್| ಶಂಖಪಾಲಂ ಧೃತರಾಷ್ಟ್ರಂ ತಕ್ಷಕಂ, ಕಾಲಿಯಂ ತಥಾ”|| ಅನಂತ, ವಾಸುಕೀ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯ ಇರುವುದಿಲ್ಲ ಮತ್ತು ವಿಷದಿಂದ ತೊಂದರೆಯಾಗುವುದಿಲ್ಲ.’
    ಪೂಜೆ.
    ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ. ನಾಗರಪಂಚಮಿಯನ್ನು ಇಡೀ ದೇಶದಲ್ಲಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇದಕ್ಕೆ ವಿಶಿಷ್ಟ ಪ್ರಾಮುಖ್ಯತೆಯೂ ಇದೆ.

    ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ನಾಗರ ಪಂಚಮಿಯ ಸಂಭ್ರಮಕ್ಕಾಗಿ ಈ ವಿಡಿಯೋ ಲಿಂಕನ್ನು ಒತ್ತಿರಿ…

    Share Information
    Advertisement
    Click to comment

    Leave a Reply

    Your email address will not be published. Required fields are marked *