KARNATAKA
ಒಎಲ್‌ಎಕ್ಸ್ ನಲ್ಲಿ1 ರೂ. ನಾಣ್ಯ ಮಾರಲು ಹೋಗಿ ಲಕ್ಷ ಕಳಕೊಂಡ ಶಿಕ್ಷಕಿ..!

ಬೆಂಗಳೂರು, ಜೂನ್ 23: ಶಿಕ್ಷಕಿಯೊಬ್ಬರು ಓಎಲ್ಎಕ್ಸ್ನಲ್ಲಿ 1947ರ ಇಸವಿಯ 1 ರೂ. ನಾಣ್ಯವನ್ನು ಮಾರಾಟಕ್ಕಿಟ್ಟು, ಸೈಬರ್ ವಂಚಕರು 1 ಕೋಟಿ ರೂ.ಗೆ ಖರೀದಿ ಮಾಡುವ ನೆಪದಲ್ಲಿ 1 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
ಸರ್ಜಾಪುರ ರಸ್ತೆ ವಿಪ್ರೋ ಗೇಟ್ನಲ್ಲಿ ನೆಲೆಸಿರುವ 38 ವರ್ಷದ ಶಿಕ್ಷಕಿ ವಂಚನೆಗೆ ಒಳಗಾದವರು. ಶಿಕ್ಷಕಿಯು ಜೂನ್ 15ರಂದು ಓಎಲ್ಎಕ್ಸ್ನಲ್ಲಿ 1947ನೇ ಇಸವಿಯ 1 ರೂ. ನಾಣ್ಯವೊಂದು ಮಾರಾಟಕ್ಕೆ ಇರುವುದಾಗಿ ಜಾಹೀರಾತು ಹಾಕಿ ತನ್ನ ಮೊಬೈಲ್ ನಂಬರ್ ಅಪ್ಲೋಡ್ ಮಾಡಿದ್ದರು.

ಅಪರಿಚಿತ ವ್ಯಕ್ತಿ ಕರೆ ಮಾಡಿ 1 ರೂ. ನಾಣ್ಯವನ್ನು 1 ಕೋಟಿ ರೂ.ಗೆ ಖರೀದಿ ಮಾಡುವುದಾಗಿ ಹೇಳಿದ್ದಾನೆ. ಆನಂತರ ಹಣ ವರ್ಗಾವಣೆ ಮಾಡಿರುವುದಾಗಿ ನಕಲಿ ಸ್ಕ್ರೀನ್ ಶಾಟ್ ತೆಗೆದು ಶಿಕ್ಷಕಿಗೆ ವಾಟ್ಸ್ಆಯಪ್ ಮಾಡಿದ್ದ. ಇದನ್ನು ನಂಬಿದ್ದ ಶಿಕ್ಷಕಿಗೆ ಎಷ್ಟು ಹೊತ್ತಾದರು ಹಣ ಖಾತೆಗೆ ಬಂದಿಲ್ಲ. ಆಗ ಶಿಕ್ಷಕಿ, ಅಪರಿಚಿತ ವ್ಯಕ್ತಿಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ಹೇಳಿದ್ದಾರೆ. ವಂಚಕ, ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಶುಲ್ಕ ಪಾವತಿ ಮಾಡಬೇಕೆಂದು ನಂಬಿಸಿ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಇದಾದ ಮೇಲೆ ಮತ್ತೆ ಆರ್ಬಿಐ ಶುಲ್ಕ, ತೆರಿಗೆ ಹೀಗೆ ನಾನಾ ನೆಪದಲ್ಲಿ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗೆ 1 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ, ಶಿಕ್ಷಕಿ ಬ್ಯಾಂಕ್ ಖಾತೆಗೆ ಯಾವುದೇ ಹಣ ವರ್ಗಾವಣೆ ಆಗಿಲ್ಲ. ವಂಚಕ ಮತ್ತೆ ಹಣ ಕೇಳಿದಾಗ ಅನುಮಾನ ಬಂದ ಶಿಕ್ಷಕಿ, ಹಣ ಪಡೆದ ಆರೋಪಿ ವಿರುದ್ಧ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.