LATEST NEWS
ನಾಗಾಲ್ಯಾಂಡಿನ 6 ಜಿಲ್ಲೆಗಳಲ್ಲಿ ಚುನಾವಣಾ ಬಹಿಷ್ಕಾರ, ಶೂನ್ಯ ಮತದಾನ ದಾಖಲು..!!

ನವದೆಹಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ. ಅಂದ್ರೆ ಸಾರ್ವಜನಿಕರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.
ಪೂರ್ವ ನಾಗಾ ಲ್ಯಾಂಡನ್ನು ಪ್ರತ್ಯೇಕ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂದುಒತ್ತಾಯಿಸಿ ಶುಕ್ರವಾರದ ಮತದಾನ ಬಹಿಷ್ಕರಿಸಲಾಗಿದೆ. ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ಇಂದು ಶುಕ್ರವಾರ ‘ಪಬ್ಲಿಕ್ ಎಮರ್ಜೆನ್ಸಿ’ ಘೋಷಣೆ ಮಾಡಿ, ಚುನಾವಣೆಯನ್ನು ಬಾಯ್ಕಾಟ್ ಮಾಡುವಂತೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿ ಮತದಾನವೇ ನಡೆದಿಲ್ಲ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್ನ ಮುಖ್ಯ ಚುನಾವಣಾಧಿಕಾರಿಯಿಂದ ENPO ಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿದೆ. ಐಪಿಸಿ ಸೆಕ್ಷನ್ 171ಸಿ ಸಬ್ಸೆಕ್ಷನ್ ಅಡಿಯಲ್ಲಿ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ಚುನಾವಣಾ ಅಧಿಕಾರಿ ಶೋಕಾಸ್ ನೋಟೀಸ್ ನೀಡಿದ್ದಾರೆ.
ಚುನಾವಣಾ ಅಧಿಕಾರಿ ನೋಟಿಸಿಗೆ ಉತ್ತರಿಸಿದ ENPO ಸಂಘಟನೆ ಪೂರ್ವ ನಾಗಾಲ್ಯಾಂಡ್ ಪ್ರದೇಶ ನಮ್ಮ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಮಾಜ ಘಾತುಕ ಶಕ್ತಿಗಳು ಸೇರಿ ಹಿಂಸಾಚಾರ ಆಗುವ ಸಾಧ್ಯತೆ ಇತ್ತು. ಅದನ್ನು ನಿಯಂತ್ರಿಸಲು ಪಬ್ಲಿಕ್ ಎಮರ್ಜೆನ್ಸಿ ಎಂದು ಅಧಿಸೂಚನೆ ತರಲಾಯಿತು. ಸಂಬಂಧಿತ ಜನರು ಮತ್ತು ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಎಮರ್ಜೆನ್ಸಿ ಘೋಷಿಸಲಾಗಿದೆ. ಇದು ಜನರೇ ಸ್ವಯಿಚ್ಛೆಯಿಂದ ಕೈಗೊಂಡ ನಿರ್ಧಾರ. ಚುನಾವಣೆಯ ಕಾರ್ಯಗಳಿಗೆ ತಡೆ ತರುವ ಪ್ರಯತ್ನ ಅಲ್ಲ ಇದು. ಹೀಗಾಗಿ, ಸೆಕ್ಷನ್ 171ಸಿ ನಿಯಮ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ ಸ್ಪಷ್ಟಪಡಿಸಿದೆ.
