UDUPI
ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ

ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ
ಉಡುಪಿ, ಅಕ್ಟೋಬರ್ 23: ಸ್ವಾತಂತ್ರ್ಯ, ಸ್ವಾಭಿಮಾನದ ಪರಿಕಲ್ಪನೆಯನ್ನು ಭಾರತೀಯರಲ್ಲಿ ಬಿತ್ತಿದ ಆದ್ಯ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ ಬಾಬು ಹೇಳಿದರು. ಅವರಿಂದು ಕುತ್ಪಾಡಿ ಕಟ್ಟೆಗುಡ್ಡೆಯ, ನವಚೇತನ ಯುವಕ/ಯುವತಿ ಮಂಡಲ, ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾಭಿಮಾನ ಮತ್ತು ಸ್ವತಂತ್ರವಾಗಿ ಎಲ್ಲ ಪಿಡುಗುಗಳ ವಿರುದ್ಧ ಹೋರಾಡಿ ಬದುಕುವ ರೀತಿಯನ್ನು ರಾಣಿ ಚೆನ್ನಮ್ಮ ಕಲಿಸಿದ್ದು, ಎಲ್ಲರಿಗೂ ಇಂದು ಮಾದರಿಯಾಗಿದೆ. ಚೆನ್ನಮ್ಮಳ ಆದರ್ಶ, ಜೀವನ ಕ್ರಮ, ಹೋರಾಟದ ಹಾದಿ ಪ್ರತಿಯೊಬ್ಬ ಮಹಿಳೆಯರಲ್ಲಿ ಮೂಡಿಬರಬೇಕೆಂದು ಅವರು ಹೇಳಿದರು.

ಬಾಲ್ಯದಲ್ಲಿಯೇ ವೀರಶೌರ್ಯ ಮೆರೆದು, ಧೈರ್ಯದಿಂದ ಮುನ್ನುಗ್ಗುತ್ತಿದ್ದ ದಿಟ್ಟ ಮಹಿಳಾಮಣಿಯರಲ್ಲಿ ಚೆನ್ನಮ್ಮ ಕೂಡ ಒಬ್ಬರು. ಚೆನ್ನಮ್ಮಳ ಜೀವನ ಕ್ರಮ, ತತ್ವ , ಆದರ್ಶ, ಸಾಹಸ ಮತ್ತು ನಾಡಿಗಾಗಿ ಹೋರಾಡಿದ ಹಾದಿಯನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕೆಂದು ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ಹೇಳಿದರು.
ಚೆನ್ನಮ್ಮಳ ಹೋರಾಟ, ರೋಚಕ ಚರಿತ್ರೆ, ಧೈರ್ಯ, ಸಾಹಸ ಕನ್ನಡ ನಾಡಿನ ಮಣ್ಣಿನಲ್ಲಿ ಇನ್ನೂ ಚಿರಸ್ಥಾಯಿಯಾಗಿದೆ. ಧೈರ್ಯ ಇದ್ದರೆ ಸಾಲದು, ಸಂದರ್ಭಕ್ಕೆ ತಕ್ಕಂತೆ ಸವಾಲುಗಳನ್ನು ಎದುರಿಸುವ ಛಾತಿ ಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ್ ಎಂ.ಪಾಟೀಲ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ರಾಣಿ ಚನ್ನಮ್ಮ ಅವರ ಸಾಹಸವನ್ನು ಸ್ಮರಿಸಿದರು. ಕನ್ನಡ ಮತ್ತು ಸಂಸ್ಖøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹದೇವಯ್ಯ, ಯುವಕ ಮಂಡಲದ ಅಧ್ಯಕ್ಷರಾದ ಗಿರೀಶ್ ರಾವ್ ಮತ್ತು ಯುವತಿ ಮಂಡಲದ ಅಧ್ಯಕ್ಷರಾದ ಶಾರದಾ ಉಮೇಶ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಚೆಂಡೆ ಬಳಗದವರಿಂದ ಚೆಂಡೆವಾದನ ಮತ್ತು ನವಚೇತನ ಯುವಕ/ಯುವತಿ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.