DAKSHINA KANNADA
ಸುಳ್ಯ ನಗರ ಪಂಚಾಯತ್ ನಲ್ಲಿ ಯೋಚನೆಯ ಯೋಜನೆಗೂ ಸಿಗುತ್ತೇ ಬಿಲ್!
ಸುಳ್ಯ ನಗರ ಪಂಚಾಯತ್ ನಲ್ಲಿ ಯೋಚನೆಯ ಯೋಜನೆಗೂ ಸಿಗುತ್ತೇ ಬಿಲ್!
ಸುಳ್ಯ, ಮಾರ್ಚ್ 8: ಸ್ಮಶಾನದ ಕಾಮಗಾರಿ ನಿರ್ವಹಣೆ, ತಮಿಳು ಕಾಲನಿಯ ಸ್ವಚ್ಛತೆ ಇಂಥಹ ಕಾಮಗಾರಿಗಳನ್ನು ನಡೆಸಬೇಕೆಂಬ ಯೋಚನೆ ಮಾಡಿದರೆ ಸಾಕು ಸುಳ್ಯ ನಗರ ಪಂಚಾಯತ್ ನ ಅಧಿಕಾರಿಗಳು ಹಣ ನೀಡಿ ಬಿಲ್ ಮಾಡಿ ಆಗುತ್ತೆ.
ಹೌದು ಇಂಥಹ ಯೋಚನೆಯ ಯೋಜನೆಗೆ ಬಿಲ್ ಪಡೆದು ಇದೀಗ ಅಧಿಕಾರಿಗಳು ಹಾಗೂ ಸದಸ್ಯನೋರ್ವ ಸಿಕ್ಕಿ ಹಾಕಿಕೊಂಡ ಘಟನೆ ಸುಳ್ಯದ ನಗರ ಪಂಚಾಯತ್ ನಲ್ಲಿ ನಡೆದಿದೆ.
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಗೆ ಬರದ ಹಾಗೂ ಅಮರ ಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಸ್ಮಶಾನದ ಸ್ವಚ್ಛತೆ ನಡೆಸಿದ್ದಾಗಿ ಹಾಗೂ ಸುಳ್ಯ ನಗರಪಂಚಾಯತ್ ವ್ಯಾಪ್ತಿಗೆ ಬರುವ ಕಂದಡ್ಕ ತಮಿಳು ಕಾಲನಿಯಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸುವುದಾಗಿ ಹೇಳಿಕೊಂಡು ಹಣ ಲಪಟಾಯಿಸಲಾಗಿದೆ.
ಆದರೆ ವಾಸ್ತವದಲ್ಲಿ ನಗರ ಪಂಚಾಯತ್ ವ್ಯಾಪ್ತಿಗೆ ಬರದ ಸ್ಮಶಾನದಲ್ಲಿ ಕಾಮಗಾರಿ ನಡೆಸುವ ಪ್ರಮೇಯವೇ ಬರುವುದಿಲ್ಲ.
ಏಕೆಂದರೆ ಸ್ಮಶಾನವು ಅಮರ ಮುಡ್ನೂರು ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವುದರಿಂದ ಅದರ ನಿರ್ವಹಣೆಯ ಜವಾಬ್ದಾರಿ ಅದೇ ಪಂಚಾಯತ್ ಗೆ ಬರುತ್ತದೆ.
ಅದೇ ಪ್ರಕಾರ ನಗರ ಪಂಚಾಯತ್ ನ ಒಂದನೇ ವಾರ್ಡ್ ಕಂದಡ್ಕ ತಮಿಳು ಕಾಲನಿಯ ಚರಂಡಿಯನ್ನು ದುರಸ್ತಿ ಮಾಡಿದ ಹಾಗೂ ಸ್ಪಚ್ಛತೆ ಮಾಡಿರುವುದಾಗಿ ಸ್ಥಳೀಯ ವಾರ್ಡ್ ಸದಸ್ಯ ಅಧಿಕಾರಿಗಳೊಂದಿಗೆ ಸೇರಿಕೊಂಡು ಎರಡೂ ಕಾಮಗಾರಿಗಳಿಗೆ ಸುಮಾರು 19900 ರೂಪಾಯಿ ಹಣ ಪಡೆದುಕೊಂಡಿದ್ದಾನೆ.
ಈ ಬಿಲ್ ನಲ್ಲೂ ಗೋಲ್ಮಾಲ್ ನಡೆದಿದ್ದು, ಒಂದನೇ ವಾರ್ಡ್ ನ ಸದಸ್ಯ ಸ್ಮಶಾನ ನಿರ್ವಹಣೆ ಹಾಗೂ ತನ್ನ ಕಾಲನಿಯ ಸ್ವಚ್ಛ ಮಾಡಿಸಿಕೊಂಡಿದ್ದಕ್ಕಾಗಿ 9900 ರೂಪಾಯಿಗಳ ಬಿಲ್ಲನ್ನು ನಗರ ಪಂಚಾಯತ್ ಗೆ ನೀಡಿದ್ದ.
ಆ ಬಿಲ್ ಗೆ ತಮ್ಮ ಕಮಿಷನ್ ಸೇರಿಸಿಕೊಳ್ಳಲು ಮರೆತ ಅಧಿಕಾರಿಗಳು 9900 ರೂಪಾಯಿ ಬಿಲ್ಲಿನ ಮುಂದಕ್ಕೆ 1 ಅಂಕೆಯನ್ನು ಸೇರಿಸಿ ಬಿಲ್ಲನ್ನು 19900 ರೂಪಾಯಿಯಾಗಿ ಮಾಡಿಕೊಂಡಿದ್ದಾರೆ.
ನಗರ ಪಂಚಾಯತ್ ನ ಸದಸ್ಯನ ಜೊತೆಗೆ ಮುಖ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿ ಸೇರಿಕೊಂಡು ಬಿಲ್ ನಲ್ಲಿ ಈ ಗೋಲ್ಮಾಲ್ ನಡೆಸಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬರುತ್ತಿದೆ.
ಅಲ್ಲದೆ ಕಂದಡ್ಕ ತಮಿಳು ಕಾಲನಿಯ ಜನ ಇಂದಿಗೂ ಚರಂಡಿಯ ವಾಸನೆಯಲ್ಲೇ ಬದುಕುತ್ತಿದ್ದು, ಇದೀಗ ಕಾಲನಿಯ ಜನರೆಲ್ಲಾ ಸೇರಿ ನಗರ ಪಂಚಾಯತ್ ಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.