Connect with us

    UDUPI

    ಸರ್ಕಾರದ ಸೌಲಭ್ಯಗಳ ಸದ್ಬಳಕೆ ಪ್ರಜೆಗಳ ಹಕ್ಕು : ಪ್ರಮೋದ್ ಮಧ್ವರಾಜ್

    ಉಡುಪಿ, ಆಗಸ್ಟ್ 18: ಜನರ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸಿ, ಅವರ ಸೇವೆ ಮಾಡುವ ಹೊಣೆ ಜನಪ್ರತಿನಿಧಿ ಮತ್ತು ಅಧಿಕಾರಿಗಳದ್ದು;ಸರ್ಕಾರ ಬಡವರಿಗಾಗಿ ರೂಪಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಅನಿಲ ಭಾಗ್ಯ, ವಸತಿ ಯೋಜನೆಗಳನ್ನು ಸದ್ಬಳಕೆ ಮಾಡಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
    ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕೋಟ ಹೋಬಳಿ ಮಟ್ಟದ ಜನಸ್ಪಂದನ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಎಲ್ಲ ವರ್ಗದ ಜನರನ್ನು ಗಮನದಲ್ಲಿರಿಸಿ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಿದ್ದು ವಿದ್ಯಾರ್ಥಿಗಳಿಂದ ಹಿಡಿದು ವಯಸ್ಕರವರೆಗೆ ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
    ಈ ಉದ್ದೇಶದಿಂದಲೇ ಜನರ ಬಳಿಗೆ ಸರ್ಕಾರ ಎಂಬ ಧ್ಯೇಯದಡಿ ಜನಸ್ಪಂದನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಧಿಕಾರಿಗಳೊಂದಿಗೆ ಜನರ ಬಳಿಗೆ ಬರುವ 60ನೇ ಕಾರ್ಯಕ್ರಮವಿದು ಎಂದರು. 94 ಸಿಸಿ, 94ಸಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 12ರವರೆಗೆ ಅವಕಾಶ ಕಲ್ಪಿಸಲಾಗಿದೆಯಲ್ಲದೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು. ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಕಂದಾಯ ಇಲಾಖೆಗೆ ಜಾಗವನ್ನು ವಾಪಾಸ್ಸು ಪಡೆಯುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಶಂಕರನಾರಾಯಣ ವ್ಯಾಪ್ತಿಯಲ್ಲೇ 4,626 ಎಕರೆ ಡೀಮ್ಡ್ ಅರಣ್ಯದಿಂದ 2,482 ಎಕರೆ ವಿರಹಿತಪಡಿಸಲು ಪ್ರಕ್ರಿಯೆ ನಡೆದಿದೆ. ಕಾಡು ಉಳಿಸುವ ಜೊತೆಗೆ ಬಡ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲೂ ಪಾರ್ಮ್ 50 ಮತ್ತು 53ಗಳ ವಿಲೇಗೆ ಕ್ರಮಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
    ಸರ್ಕಾರದ ಭಾಗ್ಯ ಯೋಜನೆಗಳನ್ನು ಪಡೆಯಲು ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಿ ಎಂದ ಸಚಿವರು, ಬಸವ ವಸತಿ ಯೋಜನೆಯಡಿ ಜನರಿಗೆ ವಸತಿ ಯೋಜನೆ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಮಾಡಿಸಿಕೊಂಡರೆ ಬಾವಿ ಹಾಗೂ ಹಟ್ಟಿ ನಿರ್ಮಾಣಕ್ಕೆ ದೊರೆಯುವ ಅನುಕೂಲತೆಗಳ ಬಗ್ಗೆಯೂ ವಿವರಿಸಿದರು. ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಯೋಜನೆ, ಕ್ಷೀರಧಾರೆಯಡಿ ಹೈನುಗಾರಿಕೆಗೆ ಸಬ್ಸಿಡಿಗಳ ಬಗ್ಗೆಯೂ ನೆರೆದವರಿಗೆ ಸವಿವರ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಮಾಡಿರುವುದನ್ನು ಸದುಪಯೋಗಪಡಿಸಿ ಎಂದರು.
    ಇಂದು ಸ್ಥಳದಲ್ಲಿ 34 ಅರ್ಜಿಗಳನ್ನು ವಿಲೇ ಮಾಡಲಾಗಿದ್ದು, ಭಾಗ್ಯಲಕ್ಷ್ಮಿ ಬಾಂಡ್ ಹಕ್ಕುಪತ್ರ, ಕೃಷಿ ಸಲಕರಣೆ ವಿತರಣೆ, ಮಣ್ಣು ಆರೋಗ್ಯ ಕಾರ್ಡ್ ವಿತರಣೆ ಹಾಗೂ ಹಕ್ಕುಪತ್ರಗಳನ್ನು ವಿತರಿಸಲಾಯಿತು.
    ಹೆಚ್ಚಿನ ಅರ್ಜಿಗಳು ಭೂಮಿ ನೀಡಲು ಕೋರಿ ಬಂದಿದ್ದು, ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಭೂಮಿ ಹಕ್ಕು ನೀಡುವುದು ಕಷ್ಟವಾದ್ದರಿಂದ ಉಡುಪಿ ಮಾದರಿಯಲ್ಲಿ ವಸತಿ ಯೋಜನೆಯಡಿ ಜಾಗ ಹಾಗೂ ಮನೆ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
    ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಿದ ಸಚಿವರು, ದೀನ ದಯಾಳ್ ಉಪಾಧ್ಯಾಯ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲು ಮೆಸ್ಕಾಂನವರಿಗೆ ಸೂಚಿಸಿದರದಲ್ಲದೆ, ಭೂಮಿ ಸರ್ವೇ ಮಾಡಲು, ಆವರ್ಸೆ ಪಂಚಾಯಿತಿ ಕಟ್ಟಡಕ್ಕೆ ಭೂಮಿ ಇಲ್ಲ, ರಸ್ತೆ ಬಗ್ಗೆ ಬೇಡಿಕೆಗಳು ಬಂದವು. ಸರ್ಕಾರಿ ಬಸ್‍ಗೂ ಬೇಡಿಕೆ ಬಂದಿತಲ್ಲದೆ, ಜನಸ್ಪಂದನದಲ್ಲಿ ಡೈವೋರ್ಸ್ ಕೇಸನ್ನು ರಾಜಿ ಪಂಚಾಯಿತಿ ಮಾಡಿಸಿ ಎಂದು ಒಬ್ಬರು ಅರ್ಜಿ ನೀಡಿದ್ದರು.
    ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಜಿಲ್ಲೆಯನ್ನು ತ್ಯಾಜ್ಯ ಮುಕ್ತವಾಗಿಸಲು ಕೋಟ ಹೋಬಳಿ ವ್ಯಾಪ್ತಿಯವರು ಸಹಕರಿಸಬೇಕೆಂದು ನೆರೆದವರಿಗೆ ವಿವರಿಸಿದರು. ಉಡುಪಿ ಜಿಲ್ಲೆ ಈಗಾಗಲೇ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ತ್ಯಾಜ್ಯ ವಿಲೆಯಲ್ಲೂ ಜಿಲ್ಲೆ ದೇಶಕ್ಕೆ ಮಾದರಿಯಾಗಲು ಇದೊಂದು ಸದವಕಾಶ ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಎಲ್ಲಾ ಪಂಚಾಯತ್‍ಗಳ ಸ್ವಯಂ ಸೇವಾ ಸಂಸ್ಥೆಗಳಿಗೆ ತರಬೇತಿಯನ್ನು ನೀಡಲಾಗಿದ್ದು,ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದರು.
    ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಶೆಟ್ಟಿ, ಆವರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಿತ್ತರಂಜನ್‍ದಾಸ್ ಶೆಟ್ಟಿ, ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಹೇಮ, ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *